

ಮಳವಳ್ಳಿ: ತಾಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಮನೆ ಆವರಣಕ್ಕೆ ನುಗ್ಗಿದ ಚಿರತೆ ಮಲಗಿದ್ದ ಸಾಕುನಾಯಿಯನ್ನು ಎಳೆದೊಯ್ದಿದೆ.
ಗ್ರಾಮದ ಲಿಂಗರಾಜು ಅವರು ಸಾಕಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಂದಿನಂತೆ ಮನೆ ಮಾಲೀಕ ಲಿಂಗರಾಜು ಬೆಳಗ್ಗೆ ನೋಡಿದಾಗ ನಾಯಿ ಕಾಣದಿದ್ದಾಗ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಡಿವಿಆರ್ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.
ಕಳೆದ 10-15 ದಿನಗಳಿಂದ ಚಿರತೆಯೊಂದು ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ತಿಂದು ಹಾಕುತ್ತಿದೆ. ಇದರಿಂದ ಗ್ರಾಮಸ್ಥರು ರಾತ್ರಿಯಾಗುತ್ತಿದ್ದಂತೆ ಮನೆಯಿಂದ ಹೊರ ಬರಲು ಆತಂಕ ಪಡುತ್ತಿದ್ದರು. ಇದೀಗ ಮನೆ ಆವರಣದಿಂದ ಸಾಕು ನಾಯಿ ಎಳೆದೊಯ್ದಿರುವುದನ್ನು ಕಂಡು ಆತಂಕ ಮತ್ತಷ್ಟು ಹೆಚ್ಚಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.