ಸಾಕಾನೆಗೆ ಪ್ರವಾಸಿಗರಿಂದ ಆಹಾರ ಕೊಡಿಸುವ ಸಿಬ್ಬಂದಿ

14 yelandur 06
ಯಳಂದೂರು ಸಮೀಪದ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರು ಗಜೇಂದ್ರನಿಗೆ ಆಹಾರ ತಿನ್ನಿಸುತ್ತಿರುವುದು.
Published on

ಯಳಂದೂರು: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕೆ.ಗುಡಿ ವಲಯದಲ್ಲಿರುವ ಆನೆ ಶಿಬಿರದಲ್ಲಿ ಸಿಬ್ಬಂದಿಯ ಒತ್ತಾಸೆಯಿಣದಲೇ ಪ್ರವಾಸಿಗರು ಆನೆಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದಕ್ಕೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸಿಗರು ಆನೆಗೆ ಆಹಾರ ನೀಡುವುದು, ಫೋಟೋ ಕ್ಲಿಕ್ಕಿಸಿಕೊಳ್ಳುವುದರಿಂದ ಅದಕ್ಕೆ ಕಿರಿಕಿರಿಯಾಗುವ ಜತೆಗೆ ರೊಚ್ಚಿಗೇಳುವ ಸಾಧ್ಯತೆ ಇದ್ದು, ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದಿದ್ದಾರೆ.

ಗಜೇಂದ್ರ ಎಂಬ 67 ವರ್ಷ ಪ್ರಾಯದ ಗಂಡಾನೆ ಇದ್ದು, ಇದನ್ನು ಇಲ್ಲಿನ ಶಿಬಿರದಲ್ಲಿ ಹಲವು ವರ್ಷಗಳಿಂದಲೂ ಸಾಕಲಾಗುತ್ತಿದೆ. ಅನೇಕ ಬಾರಿ ಇದು ದಸರಾದಲ್ಲೂ ಭಾಗವಹಿಸಿದೆ. ಇದನ್ನು ನೋಡಿಕೊಳ್ಳುವ ಮಾವುತರು ಇದಕ್ಕೆ ದಿನನಿತ್ಯ ಆಹಾರ ನೀಡುತ್ತಾರೆ. ಆದರೆ, ಅವರು ಇಲ್ಲಿಗೆ ಬರುವ ಪ್ರವಾಸಿಗರ ಕೈಯಲ್ಲೂ ಆಹಾರ ತಿನ್ನಿಸುತ್ತಾರೆ. ಇದು ಮಾವುತರಿಗೆ ಮಾತ್ರ ಒಗ್ಗಿದೆ. ಬೇರೆಯವರು ಆಹಾರ ನೀಡಿದರೆ ಆನೆ ಆಕ್ರೋಶಗೊಳ್ಳುವ ಸಾಧ್ಯತೆ ಇದ್ದು, ಇದು ಮುಂದೆ ದೊಡ್ಡ ಅಪಾಯ ತಂದೊಡ್ಡುತ್ತದೆ ಎಂಬುದು ಪ್ರಾಣಿಪ್ರಿಯರ ಅನಿಸಿಕೆಯಾಗಿದೆ.

ಹಿಂದೆ ನಡೆದಿದೆ ಅವಘಢಗಳು: 2015ರಲ್ಲಿ ಇದೇ ಗಜೇಂದ್ರ ಆನೆ ಮದವೇರಿ ದಾಂಧಲೆ ನಡೆಸಿದ್ದಲ್ಲದೆ, ಮತ್ತೊಂದು ಆನೆಯನ್ನು ಕೊಂದು ಹಾಕಿತ್ತು. ಅಲ್ಲದೆ 2017ರಲ್ಲೂ ತನ್ನ ಕಾಲಿಗೆ ಹಾಕಿದ್ದ ಸರಪಳಿಯನ್ನು ಕಿತ್ತೊಗೆಯಲು ಹೋಗಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಕೋಪಿಷ್ಠ ಸ್ವಭಾವದ್ದಾಗಿದೆ. ಈ ಹಿಂದೆ ಇದೇ ಶಿಬಿರದಲ್ಲಿ ದುರ್ಗಾಪರಮೇಶ್ವರಿ ಎಂಬ ಹೆಣ್ಣಾನೆಯೂ ಇತ್ತು. ಇದನ್ನು ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿದ್ದು, ಇದೊಂದು ಆನೆ ಮಾತ್ರ ಇಲ್ಲಿದೆ.

ಹಾಗಾಗಿ, ಯಾವ ಸಂದರ್ಭದಲ್ಲಾದರೂ ಇದು ಮದವೇರಿ ಕೆರಳುವ ಸಾಧ್ಯತೆ ಇದೆ. ಆದರೆ, ಇಲ್ಲಿನ ಸಿಬ್ಬಂದಿ ಆಹಾರದ ಉಂಡೆಗಳನ್ನು ಇಲ್ಲಿಗೆ ಬರುವ ಪ್ರವಾಸಿಗರ ಕೈಗೆ ನೀಡಿ ಆನೆಗೆ ತಿನ್ನಿಸುತ್ತಿರುವುದು ಹಲವು ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂಬುದು ಅನೇಕ ಪ್ರವಾಸಿಗರು ಹಾಗೂ ಪ್ರಾಣಿಪ್ರಿಯರ ಆಗ್ರಹವಾಗಿದೆ.

ವನ್ಯಪ್ರಾಣಿಗಳಿಗೆ ಆಹಾರ ನೀಡಬಾರದು ಎಂಬ ಸಂದೇಶಗಳ ಫಲಕಗಳನ್ನು ರಸ್ತೆಯುದ್ದಕ್ಕೂ ಅಳವಡಿಸಿರುವ ಅರಣ್ಯ ಇಲಾಖೆಯಲ್ಲೇ ನಿಯಮ ಮುರಿಯಲಾಗುತ್ತಿದೆ. ವನ್ಯಪ್ರಾಣಿಗಳಿಗೆ ಸಾರ್ವಜನಿಕರು, ಪ್ರವಾಸಿಗರು ಆಹಾರ ನೀಡಿದರೆ 1,500 ರೂ.ವರೆಗೆ ದಂಡ ಹಾಕುವ ನಿಯಮಗಳು ಇಲಾಖೆಯಲ್ಲಿದ್ದು, ಇದನ್ನು ಸಾಕಾನೆ ಶಿಬಿರದಲ್ಲೇ ಗಾಳಿಗೆ ತೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net