ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮುಖ್ಯ

Published on

ಬಳ್ಳಾರಿ : ಪಠ್ಯೇತರ ಚಟುವಟಿಕೆಗಳಿಗೆ ಒಳಗಾಗದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಶಿಕ್ಷಣಭ್ಯಾಸದೊಂದಿಗೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ವಿಎಸ್ ಕೆ ವಿವಿ ಕುಲಸಚಿವ ಎಸ್.ಎನ್‌. ರುದ್ರೇಶ್ ಹೇಳಿದರು.
ಇಲ್ಲಿಯ ವಿಎಸ್ ಕೆ ವಿವಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸೃಜನಶೀಲತೆ, ಪ್ರತಿಭೆ ಮತ್ತು ಉತ್ಸಾಹವನ್ನು ಬಿಂಬಿಸಲು ಇಂತಹ ವೇದಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಪಠ್ಯಪುಸ್ತಕದ ಜೊತೆಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಭೌತಿಕವಾಗಿಯೂ ಮತ್ತು ಮಾನಸಿಕವಾಗಿಯೂ ಸದೃಢರನ್ನಾಗಿ ಮಾಡುತ್ತವೆ ಎಂದರು.
ವಿವಿಯ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ಕುಮಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಯುವಜನೋತ್ಸವದ ಉದ್ದೇಶವಾಗಿದೆ ಎಂದರು.
ಶಿಬಿರದಲ್ಲಿ ರಾಜ್ಯದ 21 ವಿಶ್ವವಿದ್ಯಾಲಯಗಳಿಂದ ಆಗಮಿಸಿರುವ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ 10 ವಿವಿಧ ಸ್ಪರ್ಧೆಗಳಲ್ಲಿ ಮೊದಲನೇ ಸ್ಥಾನದಲ್ಲಿ ಸಮಗ್ರ ಪ್ರಶಸ್ತಿಯನ್ನು ಮಂಗಳೂರು ವಿವಿ ಅಲಂಕರಿಸಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಪಡೆದುಕೊಂಡಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರಗಳನ್ನು ವಿವಿಯ ಕುಲಸಚಿವರು ವಿತರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net