ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಸಂಗೀತ ವಿವಿಗೆ ಗ್ರೀನ್ ಸಿಗ್ನಲ್

26BGMYSMUSICUNIVERSITY
Published on

ಮೈಸೂರು: ರಾಜ್ಯಾದ್ಯಂತ ಸಾಂಸ್ಕೃತಿಕ ಸಂಸ್ಥೆಗಳ ಜತೆಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸಲು ರಾಜ್ಯಪಾಲರು ಬುಧವಾರ ಅನುಮೋದನೆ ನೀಡಿದ್ದಾರೆ ಎಂದು ಕುಲಸಚಿವ ಪ್ರೊ. ನಾಗೇಶ ವಿ. ಬೆಟ್ಟಕೋಟೆ ಹೇಳಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯ, ಇಂದಿರಾಗಾಂಧಿ ರಾಷ್ಟ್ರಿ ಕಲಾ ಕೇಂದ್ರ ವತಿಯಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಬುಧವಾರ ‘ಗ್ರಂಥಸಂಪಾದನಶಾಸ್ತ್ರದ ಪರಿಚಯ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ವಿದ್ಯಾಲಯವು ಇನ್ನು ಮುಂದೆ ರಾಜ್ಯದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಪದವಿ, ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಬಹುದು. ಅಲ್ಲದೆ ಸಂಶೋಧನಾ ಸಂಸ್ಥೆಗಳನ್ನು ರಚಿಸಲು ಅನುಮೋದನೆ ಸಿಕ್ಕಿದೆ. ನೃತ್ಯ, ನಾಟಕ, ಸಂಗೀತ, ಜಾನಪದ ಕಲೆಗಳಿಗೆ ಆದಷ್ಟು ಉತ್ತೇಜನ ನೀಡಲು ನಮ್ಮ ವಿಶ್ವವಿದ್ಯಾಲಯ ಶ್ರಮಿಸಲಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರ ಕೂಡ ಅವಶ್ಯಕತೆ ಇದ್ದು, ಸರ್ಕಾರ ಕಾಲ ಕಾಲಕ್ಕೆ ಅಗತ್ಯ ಅನುದಾನ ನೀಡಬೇಕು ಎಂದರು.

ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಾರೆ, ಇಂತಹ ಕೋರ್ಸ್‌ಗಳಿಗೆ ಶುಲ್ಕ ದುಬಾರಿಯಾದರೂ ಪಾಲಕರು ಪಾವತಿಸುತ್ತಾರೆ. ಆದರೆ, ಸಂಗೀತ ಕೋರ್ಸ್‌ಗಳಲ್ಲಿ ಇದು ತದ್ವಿರದ್ದು. ಇಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿ ಅವರನ್ನು ಆಕರ್ಷಿಸಬೇಕಾಗುತ್ತದೆ. ಹಾಗಾಗಿ ಸರ್ಕಾರದಿಂದ ಅಗತ್ಯ ನೆರವು, ಪ್ರೋತ್ಸಾಹ ದೊರೆತರೆ ಸಂಗೀತ ವಿವಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಸಂಸ್ಕೃತ, ಜಾನಪದ ಹಾಗೂ ಸಂಗೀತ ವಿಶ್ವ ವಿದ್ಯಾಲಯಗಳು ಕಡೆಗಣನೆಗೆ ಒಳಗಾಗಿವೆ. ಅವುಗಳಿಗೆ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುವ ಅವಶ್ಯಕತೆ ಇದೆ. ಕಟ್ಟಡ ನಿರ್ಮಾಣ, ಡಿಜಿಟಲೀಕರಣ, ಗ್ರಂಥ ರಚನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕೋಸ್ಕರ ಮಾಡಬೇಕಾಗಿದೆ ಎಂದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಹಲವಾರು ಗ್ರಂಥಗಳನ್ನು ಸಂಗ್ರಹಿಸಲಾಗಿದೆ. ಆ ಗ್ರಂಥಗಳು ಸಂಶೋಧಕರು ಹಾಗೂ ಜನಸಾಮಾನ್ಯ ದೊರೆಯುವಂತಾಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಲಿಪಿಗಳು ಅವಶ್ಯಕ. ಲಿಪಿಗಳ ಆಧಾರದಲ್ಲಿಯೇ ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯಗಳು ಬೆಳಕಿಗೆ ಬಂದಿದ್ದು, ಲಿಪಿಗಳ ಸಂಗ್ರಹ ಹಾಗೂ ಕಲಿಸುವ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಸರ್ಕಾರದಿಂದ ಮತ್ತಷ್ಟು ನೆರವು ದೊರೆಯಬೇಕು. ಸಂಶೋಧಕರು ಸಹ ಇಂತಹ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊ ಳ್ಳಬೇಕು ಎಂದು ಹೇಳಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ವಿದ್ವಾಂಸ ಡಾ. ಎಸ್. ಜಗನ್ನಾಥ ಮಾತನಾಡಿ, ಗ್ರಂಥಸಂಪಾದನೆ ಶಾಸ್ತ್ರದ ಅಧ್ಯಯನದಲ್ಲಿ ತೊಡಗುವವರಿಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಅಧ್ಯಯನದ ಕೊರತೆ ಎದುರಾದರೆ ಹಲವಾರು ಪ್ರಮಾದಗಳು ಎದುರಾಗುತ್ತದೆ. ಪ್ರಾಚೀನ ಗ್ರಂಥಗಳಲ್ಲಿ ಕಂಡು ಬರುವ ಹಲವಾರು ಶಬ್ದಗಳು ನಮಗೆ ಪರಿಚಯ ಇರುವುದಿಲ್ಲ. ಆದರೆ ಆ ಶಬ್ದದ ಅರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಮೂಲ ಗ್ರಂಥ ಕತೃವಿಗೆ ನ್ಯಾಯ ಒದಗಿಸಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಬೆಂಗಳೂರಿನ ಸಂಯೋಜನಾ ಸಹಾಯಕಿ ಆರ್. ಸ್ವಕ್ಷಾ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಉಪ ನಿರ್ದೇಶಕಿ ಡಾ.ಸಿ. ಪಾರ್ವತಿ, ಹಿರಿಯ ವಿದ್ವಾಂಸ ಡಾ. ಟಿ.ವಿ. ಸತ್ಯನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net