

ಮೈಸೂರು: ನಗರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಅನುದಾನ ನೀಡಲಾಗಿದೆ. ಕಾಲೇಜು ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ನಗರದ ನಾಲ್ಕು ದಿಕ್ಕಿನಲ್ಲೂ ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಲಾಗಿದೆ. ಜತೆಗೆ, ನನೆಗುದಿಗೆ ಬಿದ್ದಿರುವ ದೇವರಾಜ ಮಾರುಕಟ್ಟೆ ಭವಿಷ್ಯದ ಕುರಿತು ಸಕಾರಾತ್ಮಕವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮೈಸೂರಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇರುವ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಅದಕ್ಕೆ ನಾನೇ ಶಿಲಾನ್ಯಾಸ ಮಾಡಲು ಇಲ್ಲಿಗೆ ಬರುವೆ. ರಾಜ್ಯದ ವಿವಿಧೆಡೆ ಕನಕದಾಸರ ಹೆಸರಿನಲ್ಲೂ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಗುವುದು ಎಂದರು.
ರಾಜ್ಯದ 100 ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಅನುದಾನ ಹೊರತುಪಡಿಸಿ ರಾಜ್ಯದ ಎಂಟು ಪಾಲಿಕೆಗಳಿಗೂ ವಿಶೇಷ ಅನುದಾನ ನೀಡಲಾಗುವುದು. ಶಾಲಾ ಕೊಠಡಿಗಳ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣಕ್ಕೂ ದೊಡ್ಡ ಪ್ರಮಾಣ ಅನುದಾನವನ್ನು ಖರ್ಚು ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಸ್ತ್ರೀಶಕ್ತಿ ಸಂಘ ಮತ್ತು ಯುವ ಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.
ಶ್ರೀಮಂತರಿಂದ ರಾಜ್ಯ ಅಭಿವೃದ್ಧಿಯಾಗಿಲ್ಲ. ಇಲ್ಲಿ ಜನರ ಶ್ರಮದಿಂದ ರಾಜ್ಯದ ಆರ್ಥಿಕ ಪ್ರಗತಿ ಆಗಲಿದೆ. ಶ್ರಮಿಕರು ನಾಡನ್ನು ಕಟ್ಟುವವರು. ಆದ್ದರಿಂದ ದುಡಿಮೆಗೆ ಗೌರವ ಕೊಡಬೇಕಾಗಿದೆ. ಈಗ ದುಡ್ಡೇ ದೊಡ್ಡಪ್ಪ ಅಲ್ಲ. ದುಡಿಮೆಯೇ ದೊಡ್ಡಪ್ಪ. ಈ ಆಧಾರದ ಮೇಲೆ ಸರ್ಕಾರ ನಡೆಯುತ್ತಿದೆ. ಶ್ರಮಿಕರ ವರ್ಗದ ಜನರ ಜೀವನ ಸುಧಾರಣೆಗಾಗಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಬೀಗರೂಟ, ತಿಥಿ ಊಟ, ಮದುವೆ-ಮುಂಜಿಗೆ ಮೈಸೂರಿಗೆ ಬರುತ್ತಿದ್ದರು. ಆದರೆ, ನಗರಕ್ಕೆ ಏನು ಮಾಡಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿಗೆ ಬಂದರೆ ನೂರಾರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅವರೆಂದು ಬರಿಗೈಯಲ್ಲಿ ಬಂದಿಲ್ಲ. ಅನುದಾನವನ್ನು ಕೊಟ್ಟು ಬಂದಿದ್ದಾರೆ ಎಂದರು.
ಸಿದ್ದರಾಮಯ್ಯ ಇಲ್ಲಿಯೇ ಹುಟ್ಟಿ-ಬೆಳೆದರೂ ಮೈಸೂರಿನ ಕುರಿತು ಪ್ರೀತಿ ತೋರಲಿಲ್ಲ. ಉತ್ತರ ಕರ್ನಾಟಕದ ಬೊಮ್ಮಾಯಿ ಅವರು, ಮೈಸೂರಿನ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ ಎಂದು ಹೊಗಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪಮೇಯರ್ ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಡಿ.ಆರ್.ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು
ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ.
ಬಸವರಾಜ್ ಬೊಮ್ಮಾಯಿ ಅವರು ಕೊಟ್ಟಂತಹ ಕಾರ್ಯಕ್ರಮ ಯಾವ ಮುಖ್ಯಮಂತ್ರಿಯೂ ಕೊಟ್ಟಿಲ್ಲ. ಅಕ್ಕಿ ಕೊಟ್ಟೆ…, ಅಕ್ಕಿ ಕೊಟ್ಟೆ… ಎಂದು ಹೇಳಿ 10 ಕೆಜಿಯನ್ನು 7 ಕೆಜಿಗೆ ಇಳಿಸಿ 5 ಕೆಜಿಗೆ ಕೊಟ್ಟವರನ್ನು ರಾಜ್ಯದ ಜನತೆ ನೋಡಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು
ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ. ಯಾವ ಭಾರತ್ ಜೋಡೋ ಮಾಡ್ತಿರಿ? ನಿಮ್ಮ ತಟ್ಟೆಯಲ್ಲೇ ಹೆಗಣ ಬಿದ್ದಿದೆ. ಬಣ ರಾಜಕೀಯ ಇದೆ. ಸಿದ್ದರಾಮಯ್ಯ ಅವರದು ಒಂದು ಬಣ, ಪರಮೇಶ್ವರ್ ಅವರದು ಒಂದು, ಡಿಕೆ ಶಿವಕುಮಾರ್ ಅವರದು ಒಂದು ಬಣ ಇದೆ ಎಂದು ಕಾಲೆಳೆದರು.
ಯಾರು ಪೇಸಿಎಂ ಎಂಬುದು ನನಗೆ ಗೊತ್ತಿದೆ. ನಾವು ಮೂರು ತಲೆಮಾರಿನಷ್ಟು ಸಂಪಾದನೆ ಮಾಡಿದ್ದೇವೆಂದು ರಮೇಶ್ ಕುಮಾರ್ ಹೇಳಿದರು. ನೀರಾವರಿ ಯೋಜನೆಗಳಲ್ಲಿ ಶೇ.12, 15, 18ರಷ್ಟು ತೆಗೆದುಕೊಳ್ತಾರೆಂದು ಕಾಂಗ್ರೆಸ್ ಕಚೇರಿಯಲ್ಲಿ ಉಗ್ರಪ್ಪ ಮಾತನಾಡಲಿಲ್ವ? ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು. ಮುಂದಿನ ದಿನಗಳಲ್ಲಿ ಪೋಸ್ಟರ್ ಅಂಟಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿಗಲ್ಲ ಎಂದು ಗುಡುಗಿದರು.
ಯುವ ದಸರಾವನ್ನು ಈ ಸಲ ದಿ.ಪುನೀತ್ ರಾಜ್‌ಕುಮಾರ್ ನಮನಕ್ಕೆ ಅರ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಪುನೀತ್‌ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರಿಂದ ಉದ್ಘಾಟನೆ ಮಾಡಲಾಗುವುದುಪ್ರತಾಪ್ ಸಿಂಹ, ಸಂಸದ