ಸಾಂಸತಿಕ ದಿವಾಳಿತನ ದೇಶದ ಅಭಿವೃದ್ಧಿಗೆ ಮಾರಕ : ನ್ಯಾ.ನಾಗಮೋಹನದಾಸ್​ ಕಳವಳ

1
Published on

ಚನ್ನಪಟ್ಟಣ: ಆರ್ಥಿಕ ದಿವಾಳಿಗಿಂತ ಸಾಂಸತಿಕ ದಿವಾಳಿತನ ದೇಶದ ಅಭಿವೃದ್ಧಿಗೆ ಮಾರಕ ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್​.ಎನ್​. ನಾಗಮೋಹನ್​ ದಾಸ್​ ಕಳವಳ ವ್ಯಕ್ತಪಡಿಸಿದರು.

ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇಂದು ನಾವು ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಿದ್ದರೂ ನಮ್ಮತನವನ್ನು ಮರೆತಿದ್ದೇವೆ. ಸಂಬಂಧಗಳು ಹಾಳಾಗುತ್ತಿವೆ. ಆರ್ಥಿಕ ಅಸಮಾನತೆ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ನೈತಿಕವಾಗಿ ದಿವಾಳಿಯಾಗಿದ್ದೇವೆ. ನಮಗೆ ಮೌಲ್ಯಗಳನ್ನು ಕಟ್ಟಿಕೊಡುತ್ತಿದ್ದ, ನೈತಿಕತೆಯನ್ನು ಕಲಿಸುತ್ತಿದ್ದ ಜನಪದವನ್ನು ರ್ನಿಲಕ್ಷಿಸುತ್ತಿರುವುದರಿಂದಲೇ ಈ ಪರಿಸ್ಥಿತಿ ಬಂದಿದೆ. ಇನ್ನಾದರೂ ಜನಪದವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಗಳಿಗೆ ಕಣ್ಣು ಕಿವಿ ಇಲ್ಲ: ಜನಪದ ಕಲೆಗಳು ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜನಪದ ವಿವಿ ಮತ್ತು ಸಂಗೀತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಆದರೆ, ಅಲ್ಲಿನ ನೌಕರರನ್ನು ಕಾಯಂಗೊಳಿಸಿಲ್ಲ. ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮುಂದಾಗುತ್ತಿಲ್ಲ. ಅಲ್ಲಿನ ನೌಕರರ ಸಂಕಷ್ಟ ಕೇಳುವವರಿಲ್ಲ. ಕೆಲ ದಿನಗಳ ಹಿಂದೆ ಸಂಗೀತ ವಿವಿಯ 57 ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆ ನೌಕರರ ಕುಟುಂಬದವರ ಗೋಳು ಕೇಳೋರಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಕಣ್ಣು ಇಲ್ಲ.., ಕಿವಿಯೂ ಇಲ್ಲ.... ಈ ರೀತಿ ನಡೆಸಿಕೊಂಡು ಹೋಗಲು ಈ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ನ್ಯಾ. ನಾಗಮೋಹನದಾಸ್​ ಆಕ್ರೋಶವ್ಯಕ್ತಪಡಿಸಿದರು.

ಹೆಚ್ಚುತ್ತಿದೆ ಆರ್ಥಿಕ ಅಸಮಾನತೆ: ಭಾರತ ಹಿಂದೆಂದಿಗಿಂತ ಇಂದು ಶ್ರೀಮಂತವಾಗಿದೆಯಾದರೂ ಕೆಲವೆಡೆ ಇಂದಿಗೂ ಸಹ ಜನ ಊಟವಿಲ್ಲದೆ ಪರಿತಪಿಸುತ್ತಿದ್ದಾರೆ. ಇಂದು ದೇಶದಲ್ಲಿ ಹಿಂದೆಂದಿಗಿಂತ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ದೇಶದ ಶೇ.60ರಷ್ಟು ಸಂಪತ್ತು ಕೇವಲ 1% ಜನರ ಬಳಿ ಇದ್ದರೆ, ಶೇ.20ರಷ್ಟು ಸಂಪತ್ತು 9% ಜನರ ಬಳಿಯಿದೆ. ಇನ್ನುಳಿದ ಶೇ.20ರಷ್ಟು ಸಂಪತ್ತು ಎಲ್ಲ ಸ್ತರದ ಜನರ ಬಳಿ ಹಂಚಿ ಹೋಗಿದೆ. ಇದೇ ರೀತಿ ಆರ್ಥಿಕ ಅಸಮಾನತೆ ಹೆಚ್ಚುತ್ತಾ ಹೋದರೆ ಮುಂದೊಂದು ದಿನ ಅಶಾಂತಿಯ ವಾತಾವರಣ ಸೃಷ್ಟಿಗೆ ಕಾರಣವಾದರೂ ಆಶ್ಚರ್ಯವಿಲ್ಲ ಎಂದು ನ್ಯಾ. ನಾಗಮೋಹನದಾಸ್​ ಕಳವಳ ವ್ಯಕ್ತಪಡಿಸಿದರು.

ವೈಟ್​ ಕಾಲರ್​ ಕೆಮ್​: ಇಂದು ದೇಶದಲ್ಲಿ ನಡೆಯುತ್ತಿರುವ ಬಹುತೇಕ ಭ್ರಷ್ಟಾಚಾರ ಪ್ರಕರಣಗಳಿಗೆ ವಿದ್ಯಾವಂತ ವರ್ಗವೇ ಕಾರಣವಾಗಿದೆ. ವಿದ್ಯಾವಂತ ಎನ್ನಿಸಿಕೊಂಡ ವರ್ಗವೇ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಬಹುತೇಕ ಆರ್ಥಿಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಈ ವರ್ಗದ ಪಾತ್ರವೇ ಕಂಡುಬರುತ್ತಿರುವುದು ವಿಪರ್ಯಾಸ ಎನಿಸಿದರೂ ಸತ್ಯ. ನಮ್ಮ ಜನಪ್ರತಿನಿಧಿಗಳು ಅನ್ನಿಸಿಕೊಂಡವರಲ್ಲಿ ಶೇ.73ರಷ್ಟು ಮಂದಿ ಪದವಿಧರರು ಎನ್ನಿಸಿಕೊಂಡಿದ್ದಾರೆ. ಆದರೆ, ದೇಶದ ಬಹುತೇಕ ವಿಧಾನಸಭೆಗಳಲ್ಲಿ ಶೇ.50ರಷ್ಟು ಬಿಲ್​ಗಳು ಯಾವುದೇ ಚರ್ಚೆ ಇಲ್ಲದೇ ಅಂಗೀಕಾರಗೊಳ್ಳುತ್ತಿದೆ. ನಮ್ಮ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕಾದವರು ಯಾವುದೇ ಚರ್ಚೆಗಳಲ್ಲಿ ಭಾಗಿಯಾಗದೆ ಬಿಲ್​ಗಳನ್ನು ಅಂಗೀಕರಿಸುತ್ತಿದ್ದಾರೆ. ಇದಕ್ಕಾಗಿಯೇ ಇವರನ್ನು ನಾವು ಆರಿಸಿ ಕಳುಹಿಸಿದ್ದಾ ಎಂದು ನ್ಯಾ. ನಾಗಮೋಹನದಾಸ್​ ಆಕ್ರೋಶ ವ್ಯಕ್ತಪಡಿಸಿದರು.

ಜಾನಪದ ಚೂಡಾಮಣಿ ಪ್ರಶಸ್ತಿ ಪುರಸತ ಡಾ.ಚಕ್ಕರೆ ಶಿವಶಂಕರ್​ ಮಾತನಾಡಿ, ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಜನಪದ, ಸಾಂಸತಿಕ ಕೇಂದ್ರಗಳನ್ನು ತೆರೆಯಬೇಕು. ವಿದ್ಯಾರ್ಥಿಗಳಿಗೆ ಜನಪದ ಕಲೆಗಳನ್ನು ಕಲಿಸುವ ಕೆಲಸವಾಗಬೇಕು. ಆ ಕೇಂದ್ರಗಳಲ್ಲಿ ಜಾನಪದ ಕಲಾವಿದರನ್ನು ನೇಮಿಸಿಕೊಳ್ಳಬೇಕು. ಬೇರೆ ಕಡೆ ಹಣ ಸಂಗ್ರಹಿಸಿ ಜಾನಪದ ಲೋಕವನ್ನು ಕಟ್ಟಲಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ 5,800 ಕಲಾವಿದರಿಗೆ ಮಾಸಾಶನ ನೀಡಲಾಗಿದೆ. ಕಲಾವಿದರಿಗೆ ಉದ್ಯೋಗ ಇಲ್ಲದ ಕಾರಣ ಕುಟುಂಬಗಳ ಜೀವನೋಪಾಯಕ್ಕೆ ತೊಂದರೆ ಆಗಿದೆ. ಕನಿಷ್ಠ 5 ಸಾವಿರ ರೂ. ಮಾಸಾಶನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಎಂ.ಕೆ. ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ತಜ್ಞ ಹಾಗೂ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಅಭಿನಂದನಾ ನುಡಿಗಳನ್ನಾಡಿದರು. ತಹಸೀಲ್ದಾರ್​ ಎಲ್​.ನಾಗೇಶ್​, ಕೇಂದ್ರ ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಕನ್ನಡ ಜನಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿ.ಪುಟ್ಟರಾಜು, ಉಪಾಧ್ಯಕ್ಷ ಎಂ. ಲಕ್ಷಿ$್ಮನರಸಿಂಹ, ಸಂಘಟನಾ ಕಾರ್ಯದರ್ಶಿ ಸಿ.ಆರ್​.ವಿನಯಕುಮಾರ್​, ಖಜಾಂಚಿ ಎಂ.ಎಲ್​. ರಾಮಕೃಷ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್​, ಸಾಹಿತಿ ಮಂಜೇಶ್​ಬಾಬು, ಶಿಕ್ಷಕ ಚಕ್ಕೆರೆ ಪುಟ್ಟಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net