ಸಾಂಬ್ರಾದಲ್ಲಿ ಹೆಬ್ಬಾಳ್ಕರ್ ಭರ್ಜರಿ ರೋಡ್ ಶೋ

In Sambra Hebbalkar Bharjari Road Show Belgaum
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಂಬ್ರಾದಲ್ಲಿ ರೋಡ್ ಶೋ ನಡೆಸಿದರು.
Published on

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ. ಸಾಂಬ್ರಾದಲ್ಲಿ ಲಕ್ಷ್ಮೀ ಸೋಮವಾರ ರೋಡ್ ಶೋ ನಡೆಸಿದರು. ಸಾವಿರಾರು ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲೂ ಜನರು ನಿಂತು ಹೂವು, ಮಾಲೆ ಹಾಕುವ ಮೂಲಕ ಶುಭ ಕೋರಿದರು.

ಸಾಂಬ್ರಾದ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಸಲಾಯಿತು. ಗ್ರಾಮದಲ್ಲಿ ಜಾತ್ರೆಯ ಸ್ವರೂಪದಲ್ಲಿ ಜನರು ಸೇರಿ ಲಕ್ಷ್ಮೀ ಅವರಿಗೆ ಸಾಥ್ ನೀಡಿದರು. ಹಿರಿಯರು ಕಂಡಲ್ಲೆಲ್ಲ ವಾಹನದಿಂದ ಇಳಿದು ಅವರ ಕಾಲಿಗೆರಗುವ ಮೂಲಕ ಹೆಬ್ಬಾಳ್ಕರ್ ಆಶೀರ್ವಾದ ಪಡೆದರು. ಮಹಿಳೆಯರು ಅರಿಶಿಣ-ಕುಂಕುಮ ನೀಡಿ ಶುಭ ಕೋರಿದರು.

ಹಿಂದಿನ ಚುನಾವಣೆ ವೇಳೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ. ಮನೆ ಮಗಳಂತೆ ನಿಮ್ಮ ಕಷ್ಟ, ಸುಖದಲ್ಲಿ ಜತೆಯಾಗಿದ್ದೇನೆ. ಮತ್ತೊಮ್ಮೆ ಆವಕಾಶ ಮಾಡಿಕೊಡಿ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸೋಣ. ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಿ ಎಂದು ಕೋರಿದರು.ಲಕ್ಷ್ಮೀ ಅವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸ್ಥಳೀಯ ಹಲವಾರು ಮುಖಂಡರು ಸಾಥ್ ನೀಡಿದರು. ಯುವಕರು ಜಯಘೋಷ ಮೊಳಗಿಸಿದರು. ಮನೆಗಳ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಿದರು. ಯುವತಿಯರು, ಮಹಿಳೆಯರು ಕೈ ಕುಲುಕಿ ಶುಭಾಶಯ ಹೇಳಿದರು.

ಹಿಂಡಲಗಾದಲ್ಲಿ ಬೈಕ್ ರ‌್ಯಾಲಿ: ಹಿಂಡಲಗಾದಲ್ಲಿ ಸೋಮವಾರ ಬೆಳಗ್ಗೆ ಬೃಹತ್ ಬೈಕ್ ರ‌್ಯಾಲಿ ನಡೆಯಿತು. ನೂರಾರು ಜನರು ರ‌್ಯಾಲಿಯಲ್ಲಿ ಪಾಲ್ಗೊಂಡು ಹೆಬ್ಬಾಳ್ಕರ್ ಪರ ಮತಯಾಚನೆ ಮಾಡಿದರು. ಶಿವಂ ನಗರದಿಂದ ಆರಂಭವಾದ ರ‌್ಯಾಲಿ ವಿಜಯನಗರದವರೆಗೂ ನಡೆಯಿತು. ಕಳೆದ ಅವಧಿಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ. ಜನರ ಆಶೋತ್ತರಗಳನ್ನು ಈಡೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜತೆಗೆ ಯುವಕರ ಕೈಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು. ರ‌್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಜೈಕಾರ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net