ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವರಾದ ಸತೀಶ, ಲಕ್ಷ್ಮೀಗೆ ಭರ್ಜರಿ ಸ್ವಾಗತ

lakshmi hebbalkar
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಆಗಮಿಸಿದರು.
Published on

ಬೆಳಗಾವಿ: ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಗುರುತರ ಬದಲಾವಣೆಗಳನ್ನು ಮಾಡಬೇಕೆಂಬ ಉದ್ದೇಶವಿದೆ. ಅದಕ್ಕೂ ಮುನ್ನ ಇಲಾಖೆಯ ಸಮಗ್ರ ಮಾಹಿತಿಗಳನ್ನು ಅರಿತು ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಬೆಳಗಾವಿಗೆ ಹಿಂದಿರುಗಿದ ವೇಳೆ ಭಾನುವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇನ್ನೂ ಇಲಾಖೆಗಳ ಅಧಿಕೃತವಾದ ಹಂಚಿಕೆ ಆಗಿಲ್ಲ. ಕೊಟ್ಟ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದು, ಭ್ರಷ್ಟಾಚಾರ ಮುಕ್ತವಾದ ಆಡಳಿತ ನೀಡಬೇಕೆಂಬ ಉದ್ದೇಶವಿದೆ. ಆ ಮೂಲಕ ಸರಕಾರಕ್ಕೆ, ಮುಖ್ಯಮಂತ್ರಿಗಳಿಗೆ ಒಳ್ಳೆಯ ಹೆಸರು ಬರುವಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು. ಜಿಲ್ಲೆಗೆ ಹೊಸ ಯೋಜನೆಗಳನ್ನೇನಾದರೂ ತರುವ ಉದ್ದೇಶದ ಬಗ್ಗೆ ಪ್ರಶ್ನಿಸಿದಾಗ ಅಂಥ ಗುರಿ ಇದ್ದು, ಈಗಾಗಲೆ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲವನ್ನೂ ತಿಳಿಸಲಾಗುತ್ತದೆ ಎಂದರು.

ಬೆಳಗಾವಿಗೆ ಎರಡು ಸಚಿವ ಸ್ಥಾನ:

ನೂತನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ರಾಜಕೀಯ ಸ್ಥಿತಿಗತಿಗಳಿಗೆ ಅನುಸಾರವಾಗಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನಷ್ಟೇ ನೀಡಲಾಗಿದೆ. ಇದು ಕೇವಲ ಬೆಳಗಾವಿ ಜಿಲ್ಲೆಗಷ್ಟೇ ಅನ್ವಯಿಸುವುದಿಲ್ಲ. ಸಚಿವ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನಗಳು, ಆ ಕುರಿತ ಆರೋಪಗಳು ಸಹಜ. ಮುಂಬರುವ ದಿನಗಳಲ್ಲಿ ಎಲ್ಲರಿಗೂ ಯೋಗ್ಯ ಹುದ್ದೆಗಳನ್ನು ನೀಡಲಾಗುತ್ತಿದೆ..ಶಾಸಕರಾಗಿದ್ದ ವೇಳೆ ಕೈಗೊಂಡ ಅನೇಕ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣವಾಗಿದ್ದು ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬ್ಯಾನ್ ಮಾಡುವುದಾಗಿ ಹೇಳಿಲ್ಲ:

ರಾಜ್ಯ ಸರಕಾರದಿಂದ ಯಾವುದೇ ನಿರ್ದಿಷ್ಟ ಸಂಘಟನೆಗಳನ್ನು ನಿಷೇಧಿಸುವುದಾಗಿ ಎಲ್ಲೂ ಹೇಳಿಲ್ಲ. ಅದಕ್ಕೆ ಅಂಥ ಆತುರ ಏನೂ ಇಲ್ಲ. ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಅಷ್ಟೇ ಹೇಳಲಾಗಿದೆ. ಎಸ್ ಡಿಪಿಐ, ಆರೆಸ್ಸೆಸ್ ಎಂದು ಉದಾಹರಣೆಗೆ ಹೇಳಲಾಗಿದೆಯೇ ಹೊರತು ಅವುಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಹಾಗೂ ಸತೀಶ ಜಾರಕಿಹೊಳಿ ಹೇಳಿದರು. ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಅದನ್ನೆಲ್ಲ ನೋಡೋಣ. ಕಾಂಗ್ರೆಸ್ ಸರಕಾರವಂತೂ ಇದ್ದೇ ಇರುತ್ತದೆ. 50:50: ಇರುತ್ತದೆಯೋ? 12:12 ಇರುತ್ತದೆಯೋ? ಅದು ಗೊತ್ತಿಲ್ಲ ಎಂದು ಸತೀಶ ಜಾರಕಿಹೋಳಿ ಹೇಳಿದರು.

ಗ್ಯಾರಂಟಿ ಜಾರಿಗೆ ಇನ್ನೂ ಸಮಯ ಬೇಕಿದೆ

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿಯವರು ಸಮಯ ನೀಡಬೇಕು. ನಾವು ನಿರ್ದಿಷ್ಟ ಸಮಯದಲ್ಲಿ ಜಾರಿ ಮಾಡದಿದ್ದರೆ ಪ್ರತಿಭಟಿಸಲಿ. ಇನ್ನೂ ಸಮಯ ಬೇಕಿದೆ ಎಂದರು. ವಿಮಾನ ನಿಲ್ದಾಣದ ಬಳಿ ಇಬ್ಬರೂ ನೂತನ ಸಚಿವರನ್ನು ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಸ್ವಾಗತ ಕೋರಿದರು. ಅಲ್ಲಿಂದ ಲಕ್ಷ್ಮೀ ಹೆಬ್ಬಾಳಕರ್ ಸುಳೇಬಾವಿಗೆ ತೆರಳಿ ಮಹಾಲಕ್ಷ್ಮಿಯ ದರ್ಶನ, ಆಶಿರ್ವಾದ ಪಡೆದರು. ರಸ್ತೆಯುದ್ದಕ್ಕೂ ಜನರು ಪಟಾಕಿಗಳನ್ನು ಸಿಡಿಸಿ, ಅದ್ದೂರಿಯಾಗಿ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಶ್ವಾಸ ವೈದ್ಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net