

ಶೃಂಗೇರಿ: ರೈತರು ಮುಖ್ಯ ಬೆಳೆಯೊಂದಿಗೆ ವಾಣಿಜ್ಯ ಬೆಳೆಗಳಾದ ಕಾಳುಮೆಣಸು, ಲವಂಗ, ಜಾಯಿಕಾಯಿ ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದು ಸಾಂಬಾರು ಮಂಡಳಿ ಮಾಜಿ ನಿರ್ದೇಶಕ ಶ್ರೀನಿವಾಸ್ ಹೇಳಿದರು.
ಅಡ್ಡಗದ್ದೆ ಗ್ರಾಪಂ ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ಕಾವಡಿ ಪಿಎಸಿಎಸ್ ಮತ್ತು ಸಾಂಬಾರು ಮಂಡಳಿ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಂಬಾರು ಬೆಳೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವರ್ಷ ಅತಿವೃಷ್ಟಿಯಿಂದ ತೋಟಗಾರಿಕಾ ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಕಾಳುಮೆಣಸು ಸಹಿತ ಎಲ್ಲ ಬೆಳೆಗೂ ಕೊಳೆ ರೋಗ ಬಂದಿದೆ. ಪ್ರತಿ ವರ್ಷ ನನ್ನ ತೋಟದಲ್ಲಿ ಕಾಳುಮೆಣಸು ಬಳ್ಳಿಯನ್ನು ಮರು ನಾಟಿ ಮಾಡುವುದರಿಂದ ಗಿಡ ಒಂದೇ ರೀತಿ ಉಳಿಸಿಕೊಳ್ಳಬಹುದಾಗಿದೆ. ಸಾವಯವ ಗೊಬ್ಬರ ಬಳಕೆಯಿಂದ ರೋಗ ಬಾಧೆ ಕಡಿಮೆ ಮಾಡಬಹುದಾಗಿದೆ ಎಂದರು.
ಕೊಪ್ಪ ಸಾಂಬಾರು ಮಂಡಳಿ ಫೀಲ್ಡ್ ಆಫೀಸರ್ ಆಶಾ ವಾಸುದೇವ್ ಮಾತನಾಡಿ, ಮಂಡಳಿಯಿಂದ ಸಾಂಬಾರು ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ, ಲವಂಗ ನಾಟಿಗೆ ಸಹಾಯಧನ ನೀಡಲಾಗುತ್ತದೆ. ಏಲಕ್ಕಿ ಒಣಗಿಸುವ ಡ್ರೈಯರ್, ಬಾವಿ ಮತ್ತು ಕೆರೆ ನಿರ್ಮಾಣಕ್ಕೂ ಇಲಾಖೆ ನಿಗದಿಪಡಿಸಿದ ಸಹಾಯಧನ ನೀಡಲಾಗುತ್ತದೆ ಎಂದರು.
ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಗಾನೆ ಪ್ರಸನ್ನ, ಸಾಂಬಾರು ಮಂಡಳಿ ದೋಣಿಗಲ್ ಮುಖ್ಯಸ್ಥ ಡಾ. ಹರ್ಷ, ಸುನೀಲ್‌ಕುಮಾರ್, ಎ.ಎಂ.ಶ್ರೀಧರರಾವ್ ಇದ್ದರು.