ಸಾಂಪ್ರದಾಯಿಕ ಕಲಾ ತಂಡಗಳಿಗೆ ಅವಕಾಶ

kdr ganesh
ಕಡೂರಿನಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಯುವ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯದ ಮೂಲಕ ಗಮನಸೆಳೆದ ಭಜನಾ ತಂಡದ ಕಲಾವಿದರು.
Published on

ಕಡೂರು: ಪೊಲೀಸ್ ಇಲಾಖೆಯ ಜಾಗೃತಿಯ ಪರಿಣಾಮವಾಗಿ ಗಣೇಶೋತ್ಸವ ಮೆರವಣಿಗೆಗಳಲ್ಲಿ ಸೌಂಡ್ ಸಿಸ್ಟಮ್‌ಗಳಿಗಿಂತ ಹೆಚ್ಚಾಗಿ ಬ್ಯಾಂಡ್‌ಸೆಟ್, ಚೆಂಡೆ, ವೀರಗಾಸೆ, ಡೊಳ್ಳು, ಭಜನೆ ಮಂಡಳಿಯಂತಹ ಸಾಂಪ್ರದಾಯಿಕ ಕಲಾ ತಂಡಗಳಿಗೆ ಆಯೋಜಕರು ಹೆಚ್ಚು ಮನ್ನಣೆ ನೀಡಿದ್ದಾರೆ.

ಭಾನುವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಗಣೇಶ ವಿಸರ್ಜನೆ ಮಹೋತ್ಸವಗಳು ಅರ್ಥಪೂರ್ಣವಾಗಿ ನಡೆದವು. ಪಟ್ಟಣದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಯುವ ಬಳಗದಿಂದ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಚೆಂಡೆ, ಭಜನಾ ಮಂಡಳಿ ಸೇರಿದಂತೆ ಡ್ರಮಸೆಟ್‌ಗಳ ವಾದ್ಯಗಳು ಗಮನಸೆಳೆದವು. ಗ್ರಾಮೀಣ ಭಾಗದಲ್ಲಿ ವೀರಗಾಸೆ, ಡೊಳ್ಳು, ಡ್ರಮ್‌ಸೆಟ್ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಈ ಬಾರಿ ಡಿಜೆ ಅಬ್ಬರಕ್ಕೆ ಬಹುತೇಕ ಕಡಿವಾಣ ಬಿದ್ದಿದ್ದು, ಹೆಚ್ಚಿನ ಮಂಟಪಗಳಲ್ಲಿ ವಾದ್ಯಗೋಷ್ಠಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅಬ್ಬರವಿಲ್ಲದೆ ಸಾಂಪ್ರದಾಯಿಕ ಮತ್ತು ಶಾಂತಿಯುತವಾಗಿ ಮೆರವಣಿಗೆ ನಡೆಸಲಾಗಿದೆ. ಕೇರಿಗಳಲ್ಲಿ ನಿರ್ಮಿಸಿರುವ ಮಂಟಪಗಳು ಸಾರ್ವ ಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಡಿಜೆ ಬಳಸಿದ ಮಂಟಪಗಳಿಗಿಂತ ಸಾಂಪ್ರದಾಯಿಕ ಕಲಾತಂಡಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಹಿನ್ನೆಲೆಯಲ್ಲಿ ಶಾಂತಿಯುತ ಮೆರವಣಿಗೆಗೆ ಅವಕಾಶ ನೀಡಿದಂತಾಗಿದೆ. ಮುಖ್ಯವಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರಾದಿಯಾಗಿ ವಿಸರ್ಜನೆ ಮಹೋತ್ಸವದ ಬಳಿ ಬಂದು ಗಣೇಶನಿಗೆ ನಮಸ್ಕರಿಸಲು ವಾದ್ಯಗಳಿದ್ದ ಮಂಟಪಗಳಲ್ಲಿ ಸಾಧ್ಯವಾಗಿದೆ. ಆದರೆ ಡಿಜೆ ಬಳಸುವ ಮಂಟಪಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಮಾತ್ರ ಸೇರುತ್ತಾರೆ. ಇಲ್ಲಿ ಶಬ್ದದ ತೀವ್ರತೆಗೆ ಮಕ್ಕಳು, ಮಹಿಳೆಯರು ಮತ್ತು ಹಿರಿಯರಿಗೆ ಮಂಟಪದ ಬಳಿ ಬರುವುದೇ ಕಷ್ಟವಾಗುತ್ತದೆ. ಹೀಗಾಗಿ ಡಿಜೆ ಅಬ್ಬರಕ್ಕಿಂತ ಸಾಂಪ್ರದಾಯಿಕ ಜಾನಪದ ವಾದ್ಯಗಳನ್ನು ಬಳಸುವುದೇ ಉತ್ತಮ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net