

ರೋಣ:ಕೌಟುಂಬಿಕ ಕಲಹದಿಂದ ನೊಂದು ಊರಿಂದ ಊರಿಗೆ ಅಲೆಯುತ್ತ ಪಟ್ಟಣದ ಲೀಲಾದೇವಿ ಚಿತ್ರಗಾರ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದ ಹೊಸಪೇಟೆ ಮೂಲದ ಸಂತ್ರಸ್ತೆ ಮುದ್ದಮ್ಮಾ ಕೊನೆಗೂ ಸ್ವಾದರ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದಾರೆ.
ಮಾ.2 ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡ ಪಾಟೀಲ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರ ಮುಖ್ಯಸ್ಥರಾದ ಎಸ್.ಕೆ. ವಿಜಯಲಕ್ಷ್ಮೀ ಅವರನ್ನು ಪಟ್ಟಣದ ಲೀಲಾ ಚಿತ್ರಗಾರ ಅವರ ಮನೆಗೆ ಕಳಿಸಿ ಅವರ ಮೂಲಕ ಮುದ್ದಮ್ಮಾ ಅವರನ್ನು ಗದಗಿನ ಸ್ವಾದರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕಣ್ಣೀರಿಟ್ಟ ಚಿತ್ರಗಾರ ಕುಟುಂಬ: ಸಾಂತ್ವನ ಕೇಂದ್ರದವರು ಮುದ್ದಮ್ಮಾ ಅವರನ್ನು ಕರೆದುಕೊಂಡು ಹೋಗುತ್ತಿದ್ದಂತೆ ಚಿತ್ರಗಾರ ಕುಟುಂಬ ಸದಸ್ಯರು ಕಣ್ಣೀರಿಟ್ಟರು. ಸಾಂತ್ವನ ಕೇಂದ್ರದಲ್ಲಿ ಮುದ್ದಮ್ಮಾ ಹೊಂದಿಕೊಂಡು ಹೋದರೆ ಸರಿ, ಇಲ್ಲದಿದ್ದರೆ, ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ನಮ್ಮ ಮನೆ ಮಗಳಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾ ಚಿತ್ರಗಾರ ಹೇಳಿದರು.
ನನಗೆ ಮನೆಯೂ ಬೇಡ, ಸಾಂತ್ವಮ ಕೇಂದ್ರವೂ ಬೇಡ. ನನಗೆ ನನ್ನ ಗಂಡ ಮತ್ತು ಮಕ್ಕಳು ಬೇಕು ಎಂದು ಹೇಳುತ್ತಲೇ ಒಲ್ಲದ ಮನಸ್ಸಿನಿಂದ ಮುದ್ದಮ್ಮಾ ಸಾಂತ್ವನ ಕೇಂದ್ರಕ್ಕೆ ತರಳಿದರು.