

ಮೈಸೂರು: ಲೇಖಕ ಎಸ್.ವೆಂಕಟರಮಣಸ್ವಾಮಿ (ಸಾ.ವೆ.ರ.ಸ್ವಾಮಿ) ಅವರ ಮೂರನೇ ಕೃತಿ ‘ಮರೆಯೋದುಂಟ ಈ ಸಂಕಲೆಂಟ’ ಕೃತಿಯನ್ನು ಅನಾವರಣಗೊಳಿಸಲಾಯಿತು.
ನಗರದ ಆಯಾಮ ಅಕಾಡೆಮಿ ಹಾಗೂ ಶ್ರೀರಂಗಪಟ್ಟಣದ ಶ್ರೀಹರ್ಷ ಪ್ರಕಾಶನದಿಂದ ಬೋಗಾದಿ ಬಡಾವಣೆಯ ಆಯಾಮ ಅಕಾಡೆಮಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ಜಾನಪದ ತಜ್ಞ ಡಾ.ಕಾಳೇಗೌಡ ನಾಗವಾರ ಅವರು ಮಾತನಾಡಿ, ಸಾವೆರ ಸ್ವಾಮಿ ಅವರ ‘ಮರೆಯೋ ದುಂಟ ಈ ಸಕಲೆಂಟ ಕೃತಿಯಲ್ಲಿ ಮಂಡ್ಯದ ಮಣ್ಣಿನ ಸಾಂಸ್ಕೃತಿಕ ಸಾಹಿತಿಕ ಹಾಗೂ ಭೌಗೋಳಿಕ ವೈಶಿಷ್ಟ್ಯತೆಯನ್ನ ಕಾಪಿ ಕೊಂಡಿದ್ದಾರೆ. ಬಹು ಸಂಸ್ಕೃತಿಯ ನೆಲದ ಮಣ್ಣಿನ ವಾಸನೆಯನ್ನು ದಾಖಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಟ್ಟ, ಪುಟ್ಟ ಪದ್ಯಗಳಲ್ಲಿ ನಾಲ್ಕಾರು ಸಾಲುಗಳಲ್ಲಿ ನಮ್ಮ ಹಿಂದಿನ ಆಚಾರ ವಿಚಾರಗಳು, ಬಳಸುತ್ತಿದ್ದ ಪದಗಳನ್ನು ನೆನಪಿಸಿಕೊಳ್ಳಬೇಕು ಅನ್ನೋದನ್ನ ಚೆನ್ನಾಗಿ ನಿರೂಪಿಸಿದ್ದಾರೆ. ನಮ್ಮ ಹಿಂದಿನವರು ಬಳಸುತ್ತಿದ್ದ ಭಾಷೆಯ ಸೊಗಡನ್ನು ಇಲ್ಲಿ ಕಾಣಬಹುದು. ಭಾಷೆ ಆಚಾರ ವಿಚಾರ ನೋವು ನಲಿವುಗಳನೆಲ್ಲ ಚೆನ್ನಾಗಿ ದಾಖಲಿಸಿದ್ದಾರೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಮಹದೇವು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಎಷ್ಟೋ ಕನ್ನಡ ಪದಗಳು ಕಣ್ಮರೆಯಾಗುತ್ತಿವೆ. ಯುವ ಜನಾಂಗಕ್ಕೆ ಎಷ್ಟು ಕನ್ನಡ ಪದಗಳ ಬಳಕೆ, ಅವುಗಳ ಅರ್ಥವೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಹಿರಿಯರು ಕಟ್ಟಿಕೊಂಡಿದ್ದ ಜಾನಪದ ಬದುಕಿನಿಂದ ನಿಧಾನವಾಗಿ ವಿಮುಖವಾಗುತ್ತಿದ್ದೇವೆ. ಅನೇಕ ಬಹುತ್ವದಿಂದಲೇ ಭಾರತ ವೈವಿಧ್ಯಮಯವಾಗಿ, ಜಾತ್ಯತೀತವಾಗಿ ತಲೆ ಎತ್ತಿ ಗಟ್ಟಿಯಾಗಿ ನಿಂತಿದೆ. ಆದರೆ ಇತ್ತೀಚಿನ ರಾಜಕೀಯ ಇಂತಹ ಬಹುತ್ವವನ್ನು ಹಾಳುಗೆಡುವ, ಕಂದರವನ್ನು ಸೃಷ್ಠಿಸುವ ಕೆಲಸ ನಡೆಯುತ್ತಿದೆ ಎಂದರು.
ಬಳಕೆಯಾಗದ ಎಷ್ಟೋ ಪದಗಳನ್ನು ಸಾವೆರ ಸ್ವಾಮಿ ಅವರ ಕೃತಿಯಲ್ಲಿ ಎಲ್ಲರಿಗೂ ಪರಿಚಯಿಸಿದ್ದಾರೆ. ಮೈಸೂರಿನ ಗತಕಾಲದ ವೈಭವ, ಕೈಗಾರಿಕೆಗಳು, ಗ್ರಾಮೀಣ ಭಾಗದಲ್ಲಿ ಬಳಸುತ್ತಿದ್ದ ವಸ್ತುಗಳು, ಅವುಗಳನ್ನು ಹೆಸರಿಸುತ್ತಿದ್ದ ಪದಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಪುಸ್ತಕ ಕುರಿತು ಮಾತನಾಡಿದ ಸಾಹಿತಿ, ಚಿತ್ರ ನಿರ್ದೇಶಕ ಡಾ.ರಾಜಶೇಖರ ಮಠಪತಿ (ಡಾ.ರಾಗಂ), ಸಾಹಿತಿ ಬರೆಯುವ ಯಾವ ಪದ, ಶಬ್ಧಗಳು ನಮಗೆ ಪರಿಚಯ ಇಲ್ಲ ಎನ್ನುವಂತಿಲ್ಲ. ಆದರೆ ಅವುಗಳನ್ನು ಜೋಡಣೆ ಮಾಡಿ ಪದಪುಂಜದಲ್ಲಿ ಕಟ್ಟಿಕೊಡುವ ಕಲೆಗಾರಿಕೆ ಸಾಹಿತಿಯಾದವರಿಗೆ ಗೊತ್ತಿರಬೇಕು. ಆ ಕಾರ್ಯವನ್ನು ಸಾವೆರ ಸ್ವಾಮಿ ಅವರು ಯಶಸ್ವಿಯಾಗಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಲೇಖಕ ಸಾವೆರ ಸ್ವಾಮಿ ಅವರು ಕೃತಿ ರಚಿಸಿದ ಮುಂದೆ ರಚಿಸಲಿರುವ ಕೃತಿಗಳ ಕುರಿತು ಮಾಹಿತಿ ನೀಡಿದರು.
ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಶಿಕ್ಷಕ ಸಿದ್ದಲಿಂಗು, ನಿರಂತರ ಫೌಂಡೇಷನ್‌ನ ಪ್ರಸಾದ್ ಕುಂದೂರು, ಅಯಾಮ ಅಕಾಡೆಮಿ ನಿರ್ದೇಶಕಿ ವಿದುಷಿ ಡಾ.ಎಸ್.ವಿ.ಶಾಂಭವಿಸ್ವಾಮಿ ಮಾತನಾಡಿದರು.
ಚಿತ್ರನಟ ಬಲರಾಜವಾಡಿ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ, ನಿರಂತರ ಸುಗುಣ, ಪಾಲಹಳ್ಳಿ ಶ್ರೀನಿವಾಸ್ ಇತರರು ಇದ್ದರು.