ಸಹೋದರನ ಮಗನಿಗೆ ಪಟ್ಟ ಕಟ್ಟಿದ ಸ್ವಾಮೀಜಿ

6-ANP-P2
ನಿತಿನ್ ಆರಾಧ್ಯಗೆ ಮಠಾಧೀಶರ ಪರಿಷತ್ ಸಾಕ್ಷಿಯಾಗಿ ಸಂನ್ಯಾಸ ದೀಕ್ಷೆ ನೀಡಿರುವ ೋಟೋ
Published on

ಆನಂದಪುರ: ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠಕ್ಕೆ ಗುರುವಾರ ದಿಢೀರನೆ ಉತ್ತರಾಧಿಕಾರಿ ನೇಮಕ ಮಾಡಲಾಗಿದ್ದು ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಾಲಿ ಪಟ್ಟಾಧಿಕಾರಿಯಾಗಿರುವ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ತಮ್ಮ ಸಹೋದನ ಮಗನಿಗೆ ದಿಢೀರನೆ ದೀಕ್ಷೆ ನೀಡಿ, ಉತ್ತರಾಧಿಕಾರಿಯಾಗಿ ೋಷಿಸಿರುವುದು ಭಕ್ತರ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಮರಿ ಸ್ವಾಮೀಜಿ ದೀಕ್ಷಾ ಕಾರ್ಯಕ್ರಮವನ್ನು ಇಲ್ಲಿನ ಪ್ರಧಾನ ಮಠದಲ್ಲಿ ನಡೆಸದೆ ದೂರದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ನಡೆಸಿರುವುದು ಹಲವು ಅನುಮಾನ ಮತ್ತು ಗೊಂದಲ, ಅಸಮಾಧಾನಕ್ಕೆ ಕಾರಣವಾಗಿದೆ. ಸ್ವಾಮೀಜಿಯ ಸಹೋದರನ ಮಗ ನಿತಿನ್ ಆರಾಧ್ಯನಿಗೆ ಉತ್ತರಾಧಿಕಾರಿ ದೀಕ್ಷೆ ನೀಡಿರುವ ಬಗ್ಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಕಳೆದ ಮೇ 26ರಂದು ಮಠದಲ್ಲಿ ನಿರ್ದಿಷ್ಟ ಅಜೆಂಡ ಇಲ್ಲದೆ ಸಭೆ ನಡೆಸಿ ಹಲವು ವಿಷಯಗಳ ಚರ್ಚೆ ನಡೆಸಲಾಗಿದೆ. ಸಭೆ ಕೊನೆಯಲ್ಲಿ ಮರಿ ಸ್ವಾಮೀಜಿ ನೇಮಕದ ಬಗ್ಗೆ ಸ್ವಾಮೀಜಿ ಪ್ರಸ್ತಾಪಿಸಿದಾಗ, ಭಕ್ತರು ಯಾರು? ಎಲ್ಲಿಯವರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ನಿತಿನ್ ಆರಾಧ್ಯಗೆ ಎರಡು ವರ್ಷಗಳ ಹಿಂದೆ ವಿಲ್ ಬರೆದಿರುವುದಾಗಿ ತಿಳಿಸಿದಾಗ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಠದ ಪಾರಂಪರಿಕ ಭಕ್ತರಲ್ಲಿ ಓರ್ವರಾದ ಶಾಂತಕುಮಾರ ಆಚಾಪುರ ಪ್ರತಿಕ್ರಿಯಿಸಿದ್ದು, ಇದು ಶಿಷ್ಯ ವೃಂದದ ಮಠ. ಕುಟುಂಬ ವರ್ಗದ ಮಠವಲ್ಲ. ಮಠದ ಸರ್ವ ಶಿಷ್ಯರ ಮತ್ತು ಭಕ್ತರ ಸಭೆ ನಡೆಸಿ ಯೋಗ್ಯ ಬಾಲಕನನ್ನು ಮರಿಸ್ವಾಮೀಜಿಯಾಗಿ ಆಯ್ಕೆ ಮಾಡಬೇಕು ಎಂದು ತಿಳಿಸಿದ್ದು, ಇದಕ್ಕೆ ಹಲವು ಶಿಷ್ಯರು ಸಹ ದನಿಗೂಡಿಸಿದ್ದಾರೆ.

ಯಾರು ಈ ನಿತಿನ್ ಆರಾಧ್ಯ: ಮಲ್ಲಿಕಾರ್ಜುನ ಸ್ವಾಮೀಜಿ ಸಹೋದರ ನಂಜುಂಡ ಆರಾಧ್ಯನ ಮಗ ನಿತಿನ್ ಆರಾಧ್ಯ. ಈ ಮಠದಲ್ಲಿ ಈವರೆಗೆ 19 ಸ್ವಾಮೀಜಿಗಳು ಆಗಿ ಹೋಗಿದ್ದಾರೆ. ಹಾಲಿ ಸ್ವಾಮೀಜಿ ಸೇರಿ ಒಟ್ಟು ಮೂರು ಸ್ವಾಮೀಜಿಗಳು ಒಂದೇ ಕುಟುಂಬದವರು. ಲಿಂಗಸ್ವಾಮಿ, ಸಚ್ಚಿದಾನಂದ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಹೀಗೆ ಮೂರು ಜನ ಸ್ವಾಮಿಗಳು ಕುನ್ನಾಳ ಗ್ರಾಮದ ಒಂದೇ ಕುಟುಂಬದವರು. ಈಗ ದೀಕ್ಷೆ ನೀಡಲಾದ ನಿತಿನ್ ಆರಾಧ್ಯ ಸಹ ಇದೇ ಕುಟುಂಬದವರಾಗಿದ್ದು ಒಂದೇ ಕುಟುಂಬದ ನಾಲ್ಕು ಜನ ಈ ಮಠದ ಪಟ್ಟಾಧಿಕಾರಿ ಆದಂತೆ ಆಗುತ್ತಿದೆ. ಮಠಕ್ಕೆ 150 ಎಕರೆಗೂ ಅಧಿಕ ಜಮೀನು ಮತ್ತು 100 ಕೋಟಿ ರೂ.ಗೂ ಅಧಿಕ ಆಸ್ತಿ ಪಾಸ್ತಿ ಇರುವ ಕಾರಣ ಇದೇ ಕುಟುಂಬದ ಪಾಲಾಗುವ ಭೀತಿ ಶಿಷ್ಯ ವರ್ಗದವರದ್ದಾಗಿದೆ. ಮಠಕ್ಕೆ 500 ವರ್ಷಕ್ಕೂ ಅಧಿಕ ಇತಿಹಾಸವಿದ್ದು ಕೆಳದಿ ಅರಸರ ಕಾಲದಲ್ಲಿ ರಾಜಾಶ್ರಯ ಸಹ ದೊರೆತಿತ್ತು. ಆನಂದಪುರ ಮುರುಘಾಮಠಕ್ಕೆ ಒಂದೇ ಕುಟುಂಬದ ನಾಲ್ಕು ಜನ ಪಟ್ಟಾಧಿಕಾರಿ ಆಗುತ್ತಿರುವುದು ಆಕ್ಷೇಪಾರ್ಹ. ಶಿಷ್ಯರ ಅಭಿಪ್ರಾಯ ಕೇಳದೆ ಏಕಾಏಕಿ ದಿಢೀರ್ ಸನ್ಯಾಸ ದೀಕ್ಷೆ ನೀಡುವುದು, ಪಟ್ಟಾಧಿಕಾರದ ವಿಲ್ ಬರೆದಿರುವುದು ಎಲ್ಲವೂ ಖಂಡನೀಯ. - ಶಾಂತಕುಮಾರ ಆಚಾಪುರ ಮಠದ ಶ್ರೇಯೋಭಿವೃದ್ಧಿಗೆ ಮಲ್ಲಿಕಾರ್ಜುನ ಶ್ರೀಗಳು ಶ್ರಮಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಠವನ್ನಾಗಿಸಿದ ಕೀರ್ತಿ ಇವರದ್ದು. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಪರಂಪರೆ ಮುಂದುವರೆಸುವ ಅವರ ಉದ್ದೇಶ ಸರಿಯಿದೆ. - ಕೆ.ಆರ್.ರಾಜು ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಚಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net