

ಗೋಣಿಕೊಪ್ಪ: ಕೊಡಗಿನಲ್ಲಿ ಕನ್ನಡ ಮತ್ತು ಕೊಡವ ಭಾಷೆ ಸಹೋದರ ಭಾಷೆಯಾಗಿ ಮುನ್ನಡೆಯುತ್ತಿವೆ ಎಂದು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವ ವಿದ್ಯಾಲಯ, ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಹಾಗೂ ಕಾವೇರಿ ಕಾಲೇಜು ಕನ್ನಡ ವಿಭಾಗ ಸಹಯೋಗದಲ್ಲಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಅನನ್ಯತೆ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೊಡಗು ದೇಶ ರಕ್ಷಣೆಯಲ್ಲಿ ಮಾತ್ರವಲ್ಲದೆ ಪಾಂಡಿತ್ಯದಲ್ಲಿಯೂ ಮಹತ್ವ ಪಡೆದುಕೊಂಡಿರುವ ಜಿಲ್ಲೆಯಾಗಿದ್ದು, ಕನ್ನಡ ಮತ್ತು ಕೊಡವ ಭಾಷೆ ಸಹೋದರ ಭಾಷೆಯಾಗಿ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ನೆರವಾಗುತ್ತಿದೆ. ಸಾಹಿತಿ ಐ.ಮಾ.ಮುತ್ತಣ್ಣ ಅವರ ಗ್ರಂಥ, ಕೊಡಗಿನ ಗೌರಮ್ಮ ಅವರ ಚರಿತ್ರೆಯೂ ಈಗಿನ ಪೀಳಿಗೆಗೆ ಶಕ್ತಿ ತುಂಬುತ್ತದೆ ಎಂದರು.
ಕನ್ನಡ ಎಂದರೆ ಕೇವಲ ಸಾಹಿತ್ಯವಾಗಿ ಉಳಿದುಕೊಂಡಿಲ್ಲ. ಸ್ಥಳೀಯ ಭಾಷೆ, ಕಲೆ, ಸಂಸ್ಕೃತಿಯೂ ಸೇರಿಕೊಂಡಿವೆ. ಯುದ್ಧಗಳನ್ನು ತಡೆಯುವ ಶಕ್ತಿಯಾಗಿ ಕಾವ್ಯಗಳು ರೂಪುಗೊಂಡಿದ್ದವು. ಮಹಾಕವಿ ಪಂಪ, ರತ್ನಾಕರವರ್ಣಿಯ ಸಾಹಿತ್ಯ ಶಾಂತಿಯನ್ನು ಕಾಪಾಡುವ, ಕ್ರೂರತ್ವವನ್ನು ವಿರೋಧಿಸುವಂತವಾಗಿವೆ ಎಂದು ತಿಳಿಸಿದರು.
ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಸೋಮಣ್ಣ ಹೊಂಗಳ್ಳಿ ಮಾತನಾಡಿ, ಪೀಠಗಳು ತನ್ನದೇ ಆದ ತತ್ವ ಸಿದ್ಧಾಂತದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಪಟ್ಟೋಲೆ ಪಳಮೆ ಗ್ರಂಥ ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ. ಇದೆಲ್ಲವೂ ಸಾಹಿತ್ಯ ಎಷ್ಟು ಅವಶ್ಯ ಎಂಬುದನ್ನು ತಿಳಿಸಿಕೊಡುತ್ತದೆ ಎಂದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲೆಮೂಲೆ ಮಾತನಾಡಿ, ಕರಾವಳಿ ಭಾಗದಲ್ಲಿ ಕವಿಗಳು, ಸಾಹಿತಿಗಳು ಗುರುತಿಸಿಕೊಂಡಿರುವುದು ವಿರಳ. ಇದರ ನಡುವೆ ರತ್ನಾಕರವರ್ಣಿ ಕವಿ ಮಹಾಕವಿಯಾಗಿ ಗುರುತಿಸಿಕೊಂಡಿರುವುದು ನಮ್ಮ ಹೆಮ್ಮೆ. ಪ್ರಸ್ತುತ ಕಾಲಕ್ಕೆ ಅವರ ಸಾಹಿತ್ಯ ಹೆಚ್ಚು ಹತ್ತಿರವಾಗಿದೆ ಎಂದರು.
ರತ್ನಾಕರವರ್ಣಿ ಅವರ ಭರತೇಶ ವೈಭವ ಕಾವ್ಯದ ಹಲವು ವಿಭಾಗಗಳ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಾಂಸ್ಕೃತಿಕ ಅನನ್ಯತೆ, ಭರತೇಶ ವೈಭವ ಒಂದು ಮೌಲ್ಯಮಾಪನ, ಒಂದು ವಿಮರ್ಶೆ ನೋಟ, ಭರತ ಮತ್ತು ಬಾಹುಬಲಿ ಪಾತ್ರಗಳ ಅನನ್ಯತೆ, ಯುದ್ಧ ಮತ್ತು ಶಾಂತಿ, ಯೋಗಭೋಗ ವಿಷಯ ಮಂಡಿಸಲಾಯಿತು.
ಮಂಡ್ಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಎಸ್.ಚಂದ್ರಕಿರಣ್, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಮಾಳೇಟಿರ ಬಿ.ಕಾವೇರಪ್ಪ, ಉಪ ಪ್ರಾಂಶುಪಾಲ ಡಾ.ಎ.ಎಸ್.ಪೂವಮ್ಮ, ಆಂತರಿಕ ಭರವಸೆ ಕೋಶ ಸಂಚಾಲಕಿ ಎಂ.ಎಸ್.ಭಾರತಿ ಇದ್ದರು.