ಸಹಾಯವಾಣಿ ಕರೆ ಸ್ವೀಕರಿಸಲು ಸೆಸ್ಕ್ ಸಿಬ್ಬಂದಿ ನಿರ್ಲಕ್ಷ್ಯ

12rajesh1
Published on

ಚಾಮರಾಜನಗರ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಹೇಳಿಕೊಳ್ಳಲು ಕರೆಮಾಡಿದರೇ, ಸೆಸ್ಕ್ ಸಿಬ್ಬಂದಿಗಳು ಕರೆ ಸ್ವೀಕರಿಸುವುದಿಲ್ಲ ಎಂದು ಸಾರ್ವಜನಿಕರು ದೂರಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ನಗರದ ಸಾರ್ವಜನಿಕರೊಬ್ಬರು ಆರೋಪಿಸಿದರು.

ಕೆಲವು ಸಂದರ್ಭದಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಾಯವಾಣಿಗೆ ಕರೆಮಾಡಿದರೇ, ಸಿಬ್ಬಂದಿಗಳು ಕರೆಸ್ವೀಕರಿಸಿ ಮಾತನಾಡಿದೇ ಹಾಗೇ ಫೋನ್ ತೆಗೆದು ಇಟ್ಟಿರುತ್ತಾರೆ. ಈಗಾದರೇ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಹೇಗೆ ಎಂದು ದೂರಿದರು.

ಈ ಸಂದರ್ಭದಲ್ಲಿ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಪ್ರದೀಪ್ ಪ್ರತಿಕ್ರಿಯಿಸಿ, ಸಭೆಯ ಸ್ಥಳಕ್ಕೆ ಸಹಾಯವಾಣಿ ಕರೆ ಸ್ವೀಕರಿಸುವ ಸಿಬ್ಬಂದಿಯನ್ನು ಕರೆಯಿಸಿ, ಯಾವುದೇ ಕಾರಣಕ್ಕೂ ಕರೆ ಸ್ವೀಕರಿಸಿ ೆನ್ ತೆಗೆದು ಇಡಬಾರದು ಎಂದು ಸೂಚನೆ ನೀಡಿದರು. ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ. ಇಲ್ಲವಾದರೇ ನೀವು ದೂರು ನೀಡಿಬಹುದು ಎಂದು ತಿಳಿಸಿದರು.

ನಗರದ ನಿವಾಸಿ ಅಬ್ದುಲ್ ದಯಾನ್ ಷರೀಫ್ ಮಾತನಾಡಿ, ನಾವು ಆಟೋ ಎಲ್‌ಪಿಜಿ ಬಂಕ್ ನಡೆಸುತ್ತಿದ್ದೇವೆ, ಈ ಮೊದಲು 4000-5000 ರೂ, ವಿದ್ಯುತ್ ಬಿಲ್ ಬರುತ್ತಿತ್ತು. ಆದರೇ ಇತ್ತೀಚೆಗೆ ಏಕಾಏಕಿ 14,000 ರೂ, ಬಿಲ್ ಬಂದಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.

ಇಇ ಪ್ರದೀಪ್ ಪ್ರತಿಕ್ರಿಯಿಸಿ, ನೀವು ವಿದ್ಯುತ್ ಬಳಕೆ ಮಾಡುವುದರ ಮೇಲೆ ದರ ನಿಗದಿಯಾಗುತ್ತದೆ. ಯಾವುದೇ ಕಾರಣಕ್ಕೂ ಹೆಚ್ಚು ಬಿಲ್ ಬರಲು ಸಾಧ್ಯವಿಲ್ಲ. ಅದಾಗ್ಯೂ ಸಮಸ್ಯೆಯಾಗಿದೆ ಎಂದರೇ, ರೇಟಿಂಗ್ ಪರಿಶೀಲಿಸಿ ನಂತರ ಸರಿಪಡಿಸಲಾಗುವುದು ಎಂದರು. ಸಭೆಯಲ್ಲಿ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಶ್, ಎಇ ನಾಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ಮಂಗಳಮ್ಮ ಹಾಗೂ ಇತರರು ಹಾಜರಿದ್ದರು.

ವಿದ್ಯುತ್ ತಂತಿ ತೆರವುಗೊಳಿಸಿ:

ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಪ್ರಸಾದ್ ಮಾತನಾಡಿ, ಉತ್ತುವಳ್ಳಿ ಗ್ರಾಮದ ಸಮೀಪದಲ್ಲಿರುವ ನಮ್ಮ ಜಮೀನಿನ ಮೇಲೆ 11ಕೆವಿ ವಿದ್ಯುತ್ ತಂತಿ ಹಾದು ಹಾಗಿದೆ. ಅದು ಹಳೆಯದಾದ ವಿದ್ಯುತ್ ತಂತಿಯಾಗಿದ್ದು, ಯಾವಾಗ ಕಟ್ಟಾಗಿ ಬೀಳುತ್ತದೋ ಗೊತ್ತಿಲ್ಲ. ಅದನ್ನು ಕೂಡಲೇ ಸರಿಮಾಡಿಸಿಕೊಡಿ ಎಂದು ಮನವಿ ಮಾಡಿದರು. ಎಇಇ ಮಹೇಶ್ ಪ್ರತಿಕ್ರಿಯಿಸಿ, ಮುಂದಿನ ಬಜೆಟ್‌ನಲ್ಲಿ ವಿದ್ಯುತ್ ತಂತಿಯನ್ನು ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಉಡಿಗಾಲ ಗ್ರಾಮದ ನಾಗರಾಜಶೆಟ್ಟಿ ಮಾತನಾಡಿ, ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಆಗಾಗ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ದೂರದ ಹೊನ್ನಹಳ್ಳಿಗೆ ಹೋಗಿ ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು ಎಂದರು. ಇಇ ಪ್ರದೀಪ್ ಪ್ರತಿಕ್ರಿಯಿಸಿ, ಈ ದೂರನ್ನು ಹರದನಹಳ್ಳಿ ವಿಭಾಗಕ್ಕೆ ವರ್ಗಾಯಿಸಿ, ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net