

ನರಗುಂದ: ತಾಲೂಕಿನ ಹದಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಶನಿವಾರ ಉದ್ಘಾಟಿಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಂದಾಯ ಇಲಾಖೆಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ, ವೋಟರ್ ಐಡಿಗೆ ಆಧಾರ್ ನಂಬರ್ ಲಿಂಕ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್, ಪಿಎಂ ಜನಧನ ಯೋಜನೆಯಡಿ ಸಹಾಯಧನ ಪಡೆಯಲು ಇ- ಕೆವೈಸಿ ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ವಿವಿಧ ಸಹಾಯಧನ, ಪರಿಹಾರವನ್ನು ನೇರವಾಗಿ ಫಲಾನುಭವಿಗಳಿಗೆ ತಲá-ಪಿಸಲು ಸಹಾಯವಾಗುತ್ತದೆ’ ಎಂದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ಸಾರ್ವಜನಿಕರನ್ನು ಕಚೇರಿಗೆ ವಿನಾಕಾರಣ ಅಲೆದಾಡಿಸುವುದನ್ನು ತಪ್ಪಿಸುವುದು. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪಹಣಿ ತಿದ್ದುಪಡಿ, ಪಿಂಚಣಿ ಆದೇಶ ಸೇರಿ ಇತರ ಸೌಲಭ್ಯಗಳನ್ನು ಸ್ಥಳದಲ್ಲಿಯೇ ವಿತರಿಸುವುದು ಕಾರ್ಯಕ್ರಮದ ಆಶಯವಾಗಿದೆ. ಸದರಿ ಕಾರ್ಯಕ್ರಮದಲ್ಲಿ ವೈಯಕ್ತಿಕ, ಸಮುದಾಯಿಕ ಸೌಲಭ್ಯಗಳ ಕುರಿತು ಅಹವಾಲು ಸಲ್ಲಿಸಿದ್ದಲ್ಲಿ ಆದ್ಯತೆಯ ಮೇರೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು. ಸರ್ಕಾರದ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಗತ್ಯದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗದಿಗೆಪ್ಪ ಮಂತ್ರಿ ಮಾತನಾಡಿ, ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಗೊಳಿಸುವಂತೆ ಕೋರಿದರು. ಅಲ್ಲದೆ, ಗ್ರಾಮದ ಕೆಲ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಜಿಲ್ಲಾಧಿಕಾರಿಗಳಿಂದ ಸರ್ಕಾರದ ಸೌಲಭ್ಯ ಪಡೆಯೋಣ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ತೋಟಗಾರಿಕೆ ಇಲಾಖೆಯ ಸಹಾಯಧನ ಯೋಜನೆಯಡಿ ಮಿನಿ ಟ್ರ್ಯಾಕ್ಟರ್ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾದ ಪ್ರಮಾಣ ಪತ್ರಗಳ ವಿತರಣೆ, ದನದ ಕೊಟ್ಟಿಗೆ ನಿರ್ವಣದ ಆದೇಶ ಪ್ರತಿ, ವಸತಿ ಯೋಜನೆಯಡಿ ಮನೆ ಮಂಜೂರಾತಿ, ಅಂಗವಿಕಲರಿಗೆ ಯುಡಿಐಡಿ ಕಾರ್ಡ್, ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಗೀತಾ ಚಲವಾದಿ, ಎಸ್ಡಿಎಂಸಿ ಅಧ್ಯಕ್ಷ ತಮ್ಮನಗೌಡರ, ಗ್ರಾಪಂ ಸದಸ್ಯರು, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೊಟೆಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ, ಬಿಸಿಎಂ ಜಿಲ್ಲಾ ಅಧಿಕಾರಿ ಮೆಹಬೂಬ್, ಡಿಡಿಎಲ್ಆರ್ ರವಿಕುಮಾರ್, ತಹಸೀಲ್ದಾರ್ ಎ.ಡಿ. ಅಮರಾವದಗಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಡಿ. ಹಿರೇಮನಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಗ್ರಾಮ ಪ್ರದಕ್ಷಿಣೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಸುಶೀಲಾ ಅವರ ಜತೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಹದಲಿ ಗ್ರಾಮದ ಪ್ರದಕ್ಷಿಣೆ ಮಾಡಿದರು. ಗ್ರಾಮದ ರಸ್ತೆ ಪರಿಶೀಲನೆ, ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಆರೋಗ್ಯ ಮೇಳ ಉದ್ಘಾಟಿಸಿದರು. ಅತಿವೃಷ್ಟಿಯಿಂದಾದ ಮನೆ ಹಾನಿ ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು. ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ ಪರಿಶೀಲಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಮದ ಎಸ್ಸಿ ಕಾಲನಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದರು. ಬೆಣ್ಣೆ ಹಳ್ಳ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಎ.ಡಿ. ಅಮರಾವದಗಿ ಇದ್ದರು.