

ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಭಾನುವಾರ ರಜಾದಿನವಾದ ಕಾರಣ ದೇವಾಲಯದ ಸುತ್ತ ಭಕ್ತ ಸಾಗರ ಸುತ್ತುವರಿದಿತ್ತು. ನೂಕುನುಗ್ಗಲು, ಗೊಂದಲ ಇಡೀ ದಿನ ಮುಂದುವರಿದಿತ್ತು.
ಶಾಸಕ ಎಚ್.ಡಿ. ರೇವಣ್ಣ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ನಟಿ ಶ್ರುತಿ ಮತ್ತು ಕುಟುಂಬ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ , ಹೈಕೋರ್ಟ್ ನ್ಯಾಯಾಧೀಶ ಸಂಜೀವ್ ಕುಮಾರ್, ಹಾಸನದಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದು, ಈಗ ಬೆಂಗಳೂರು ಕೇಂದ್ರ ಡಿಸಿಪಿ ಆಗಿರುವ ಆರ್. ಶ್ರೀನಿವಾಸಗೌಡ ಅವರು ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು.
ಮುಂಜಾನೆ 4 ಗಂಟೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬಂದು ಸರತಿಸಾಲಿನಲ್ಲಿ ನಿಲ್ಲಲಾರಂಭಿಸಿದ್ದರು. ಸಾಲುಸಾಲು ರಜೆಗಳಿರುವುದರಿಂದ ಸಹಜವಾಗೇ ಭಕ್ತರ ಸಂಖ್ಯೆ ಮಿತಿಮೀರಿತ್ತು. ಅಲ್ಲದೆ ವಿಶೇಷ ಪಾಸ್ ಪಡೆದಿದ್ದ ಭಕ್ತರ ಸಂಖ್ಯೆಯೂ ಹೆಚ್ಚಿದ್ದು, ಮೂರು ಸಾಲುಗಳನ್ನಾಗಿ ಮಾಡಿ ಒಳಬಿಡಲಾಯಿತು. ಸಾವಿರ ರೂ. ಮತ್ತು 300 ರೂ. ಟಿಕೆಟ್‌ಗಳ ವಿಶೇಷ ದರ್ಶನದ ಸಾಲುಗಳು ಸಹ ಹೆಬ್ಬಾವಿನಂತೆ ಉಬ್ಬಿ ಆಂಜನೇಯನ ಬಾಲದಂತೆ ಬೆಳೆದಿದ್ದವು.
ಸಾಮಾನ್ಯ ಸರದಿ ಸಾಲು ಕಿ.ಮೀ.ಗಟ್ಟಲೆ ಉದ್ದಕ್ಕೆ ಬೆಳೆದು ಬಿಸಿಲಿನ ಜಳ ತಾಳಲಾರದೆ ಭಕ್ತರು ಪರಿತಪಿಸಿದರು. ಸಾಲು ಬಹಳ ಬೇಗ ಮುಂದುವರಿಯದ ಕಾರಣ ಜಿಲ್ಲಾಡಳಿತದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂ ಸೇವಕರು ಆಗಾಗ್ಗೆ ಭಕ್ತರಿಗೆ ನೀರು, ಮಜ್ಜಿಗೆ ಸರಬರಾಜು ಮಾಡಿ ಅವರ ಆಕ್ರೋಶ ತಣ್ಣಗಾಗಿಸುತ್ತಿದ್ದರು.
ಅನಿತಾರನ್ನು ಅಕ್ಕಾ ಎಂದು ಸ್ವಾಗತಿಸಿದ ಪ್ರೀತಂ:
ಭಾನುವಾರ ದೇವಾಲಯಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರನ್ನು ಎದುರುಗೊಂಡ ಶಾಸಕ ಪ್ರೀತಂಗೌಡರ, ‘ಬನ್ನಿ ಅಕ್ಕಾ’ ಎಂದು ನಗುತ್ತಾ ಸ್ವಾಗತಿಸಿ ಗರ್ಭಗುಡಿಗೆ ಕರೆದೊಯ್ದು ದೇವಿಯ ದರ್ಶನ ಮಾಡಿಸಿದರು. ಎಚ್.ಡಿ. ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ. ರೇವಣ್ಣ ಅವರನ್ನು ತಿರುಗಿಯೂ ನೋಡದ ಶಾಸಕ ಪ್ರೀತಂಗೌಡರ ಇಂದಿನ ನಡೆದ ಎಲ್ಲರಲ್ಲಿ ಅಚ್ಚರಿ ಮೂಡಿಸಿತು.
ಭಕ್ತರೊಂದಿಗೆ ಬೆರೆತ ಶಾಸಕ:
ಶಾಸಕ ಪ್ರೀತಂ ಗೌಡ ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿ ಗರ್ಭಗುಡಿಯ ಬಾಗಿಲಲ್ಲಿ ನಿಂತು ಸಾಲಿನಲ್ಲಿ ಬರುವ ಭಕ್ತರಿಗೆ ಸುಗಮವಾಗಿ ದೇವಿಯ ದರ್ಶನ ಆಗುವಂತೆ ನೋಡಿಕೊಂಡರು. ಪೂಜೆ ಮತ್ತು ನೈವೇದ್ಯಕ್ಕಾಗಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಬಾಗಿಲು ಮುಚ್ಚಿದ್ದರಿಂದ ಸಹಸ್ರಾರು ಭಕ್ತರು ದೇವಾಲಯದ ಹೊರಗೆ ಬಿಸಿಲಿನಲ್ಲಿ ಕಾಯ್ದು ಬಸವಳಿದರು.
ಶಾಸಕ ನಾಗೇಂದ್ರ ಗರಂ:
ಮೈಸೂರು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಅವರು ತಮ್ಮೊಂದಿಗೆ 25 ಮಂದಿಯನ್ನು ಕರೆದುಕೊಂಡು ಭಾನುವಾರ ಮಧ್ಯಾಹ್ನ 12.30ರ ಸಮದಯದಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದಿದ್ದರು. ಆದರೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು, ‘ಎಲ್ಲರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ, ಶಾಸಕರಾದರೆ ನೀವೊಬ್ಬರೇ ಬನ್ನಿ’ ಎಂದು ಕಠೋರವಾಗಿ ಹೇಳಿದರೆನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಶಾಸಕ ನಾಗೇಂದ್ರ, ಹಾಸನದ ಶಾಸಕ ಪ್ರೀತಂಗೌಡರಿಗೆ ಕರೆ ಮಾಡಿದರೆ ಅವರೂ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ನಾಗೇಂದ್ರ ಗೃಹ ಸಚಿವರಿಗೆ ದೂರವಾಣಿ ಕರೆ ಮಾಡಿ ಎಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ‘ಒಬ್ಬ ಶಾಸಕ ಮತ್ತೊಬ್ಬ ಶಾಸಕನನ್ನು ನಡೆಸಿಕೊಳ್ಳುವ ರೀತಿಯೇ ಇದು, ಈ ದೌಲತ್ತು ಹೆಚ್ಚುದಿನ ನಡೆಯುವುದಿಲ್ಲ’ ಎಂಬುದಾಗಿ ಸ್ವಪಕ್ಷದ ಶಾಸಕ ಪ್ರೀತಂಗೌಡ ವಿರುದ್ಧ ಅಸಮಾಧಾನದ ಮಾತುಗಳನ್ನಾಡಿ ಕಾರು ಹತ್ತಿ ನಿರ್ಗಮಿಸಿದರು.
ಸಿದ್ದೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ:
ಹಾಸನಾಂಬ ದೇವಾಲಯದ ಆವರಣದಲ್ಲೇ ಇರುವ ಸಿದ್ದೇಶ್ವರಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ಭಾನುವಾರ ಸಂಜೆ ನಡೆಯಿತು. ಚೆಂಡುಹೂ, ಸೇವಂತಿಗೆ, ಗುಲಾಬಿ ಮತ್ತಿತರ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಸಿದ್ದೇಶ್ವರಸ್ವಾಮಿ ಮೂರ್ತಿ ಇರಿಸಿ ಉತ್ಸವ ನಡೆಸಲಾಯಿತು. ಬೆಂಗಳೂರು ದಕ್ಷಿಣ ಡಿಸಿಪಿ ಆರ್. ಶ್ರೀನಿವಾಸಗೌಡ ಸಹ ಪಲ್ಲಕ್ಕಿ ಹೊತ್ತು ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಮಂಗಳವಾರ ದರ್ಶನವಿಲ್ಲ, ಒಂದೇ ದಿನ ಬಾಕಿ:
ಗ್ರಹಣದ ಪ್ರಯುಕ್ತ ಅ.25 ಮಂಗಳವಾರ ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ಮುಚ್ಚುವುದರಿಂದ ಸಾರ್ವಜನಿಕರಿಗೆ ದೇವಿಯ ದರ್ಶನ ಇರುವುದಿಲ್ಲ. ಅ.13 ರಂದು ದೇವಿಯ ಗರ್ಭಗುಡಿಯ ಬಾಗಿಲು ತೆಗೆದಿದ್ದು, ಅ.14 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಅ.26 ಒಂದು ದಿನ ಮಾತ್ರ ದೇವಿಯ ದರ್ಶನ ಪಡೆಯಬಹುದಾಗಿದೆ. ಅ.27 ಮಧ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇವಿಯ ಮುಂದೆ ದೀಪ ಹಚ್ಚಿ, ಹೂವು ಮುಡಿಸಿ, ನೈವೇದ್ಯ ಇಟ್ಟು ಬಾಗಿಲು ಮುಚ್ಚಲಾಗುವುದು. ಅಂದು ಸಾರ್ವಜನಿಕ ದರ್ಶನ ಇರುವುದಿಲ್ಲ.