ಸಹಾಯಕ ಪ್ರಾಧ್ಯಾಪಕರ ಹುದ್ದೆ ‘ಗ್ಯಾರಂಟಿ’ ಕೂಗು!

page 22
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗ
Published on

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ಪತ್ರಕ್ಕಾಗಿ 1,208 ಅರ್ಹ ಅಭ್ಯರ್ಥಿಗಳು 1 ವರ್ಷದಿಂದ ಕಾದು ಕುಳಿತಿದ್ದಾರೆ.

ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು 1 ವರ್ಷವಾದರೂ ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಮೀಸಲಾತಿ ವಿಚಾರ ಸಂಬಂಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಅನ್ಯಾಯಕ್ಕೊಳಗಾಗಿರುವ ಪ್ರತಿಭಾನ್ವಿತರಿಗೆ ನ್ಯಾಯಾಲಯದ ಅಂತಿಮ ತೀರ್ಪಿನ ನಿಬಂಧನೆಗೆ ಒಳಪಟ್ಟು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಕೂಗು ಕೇಳಿಬಂದಿದೆ.

1,242 ಎಪಿ ಹುದ್ದೆಗೆ ಅಧಿಸೂಚನೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 1,242 ಹುದ್ದೆಗಳಿಗೆ 2021ರ ಸೆಪ್ಟೆಂಬರ್ 9ರಂದು 26 ವಿಷಯಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕೆಇಎ 2022ರ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 33,183 ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ಈಗಾಗಲೇ ನಡೆದಿದ್ದರೂ ಅಂತಿಮ ಆದೇಶ ಪ್ರತಿ ನೀಡಲು ಮೀನಮೇಷ ಎಣಿಸಲಾಗುತ್ತಿದೆ.

2023ರ ಜನವರಿಯಲ್ಲಿ 18 ವಿಷಯಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗೆ ಅವಕಾಶ ಕೊಡಲಾಗಿತ್ತು. ಈ ಮಧ್ಯೆ ರಾಜ್ಯ ಸರ್ಕಾರವು ನೇಮಕಾತಿಗೆ ಅನುಸರಿಸಬೇಕಾದ ಆಯ್ಕೆ ವಿಧಾನ ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಪರಿಷ್ಕೃತ ಆದೇಶದಂತೆ 2023ರ ಮಾರ್ಚ್‌ನಲ್ಲಿ 26 ವಿಷಯಗಳಲ್ಲಿ ಆಯ್ಕೆಯಾದ 1,208 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕೆಇಇ ರಾಜ್ಯ ಸರ್ಕಾರಕ್ಕೆ ತಲುಪಿಸಿದೆಯಾದರೂ ಹೈದರಾಬಾದ್-ಕರ್ನಾಟಕ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಬಾಗಿಲು ತಟ್ಟಿದ್ದರು. ನ್ಯಾಯಾಲಯವು ಈ ಸಂಬಂಧ ತಡೆಯಾಜ್ಞೆ ನೀಡಿದ್ದು ಇದನ್ನು ನೆಪವಾಗಿಟ್ಟುಕೊಂಡು ಸರ್ಕಾರವು ಅರ್ಹ ಅಭ್ಯರ್ಥಿಗಳಿಗೆ ಅಂತಿಮ ಆದೇಶ ಪ್ರತಿ ನೀಡದೆ ಮುಂದೂಡಿಕೊಂಡು ಬರಲಾಗಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲೂ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದ್ದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಿ ಷರತ್ತುಬದ್ಧ ಆದೇಶ ನೀಡಬೇಕೆಂಬುದು ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿಗಳ ಆಗ್ರಹಪೂರ್ವಕ ಒತ್ತಾಯವಾಗಿದೆ.

ಇತ್ತ ಕಡೆ ಸರ್ಕಾರಿ, ಅತ್ತ ಕಡೆ ಖಾಸಗಿ ಉದ್ಯೋಗವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸಂಸಾರದ ಹೊಣೆ ನಿಭಾಯಿಸುವುದು ಅಸಾಧ್ಯವೆನಿಸಿದೆ. ಸರ್ಕಾರವು ಈ ಸಮಸ್ಯೆ ಪರಿಶೀಲಿಸಿ ಶೀಘ್ರ ಷರತ್ತು ಬದ್ಧ ಆದೇಶ ಪ್ರತಿ ನೀಡಿ ನಮ್ಮ ಜೀವನಕ್ಕೆ ಭದ್ರತೆ ಕಲ್ಪಿಸಬೇಕು. | ರಮೇಶ್, ಆಯ್ಕೆಯಾಗಿರುವ ಅಭ್ಯರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net