ಸಹಬಾಳ್ವೆಗಾಗಿ ಮೌನ ಜಾಗೃತಿ ಕಾರ್ಯಕ್ರಮ

2kudligi1
Published on

ಕೂಡ್ಲಿಗಿ: ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಶನಿವಾರ ಪಟ್ಟಣದ ಮದಕರಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು ಕಪ್ಪು ಉಡುಗೆ ಧರಿಸಿ ಮೇಣದ ಬತ್ತಿ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದು, ಅದಕ್ಕೆ ಪೂರಕವಾಗಿ ‘ಅರಿವಿನ ಪಯಣ’ ಎಂಬ ಲಿಂಗ ಸೂಕ್ಷ್ಮತೆ ಬೆಳೆಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಮಹಿಳೆಯರ ಮೇಲಿನ ಹಿಂಸೆಯನ್ನು ಪ್ರತಿಭಟಿಸುವ, ಸಹಬಾಳ್ವೆ, ಸೌಹಾರ್ದ ಬದುಕನ್ನು ಒತ್ತಾಯಿಸುವ, ಹಿಂಸೆಯನ್ನು ವಿರೋಧಿಸುವ ಮೌನ ಜಾಗೃತಿ ಕಾರ್ಯಕ್ರಮವನ್ನು ಎಲ್ಲ ತಾಲೂಕುಗಳಲ್ಲೂ ಹಮ್ಮಿಕೊಳ್ಳಲಾಗಿದ್ದು, ಫೆ,.7ರಂದು ಹೂವಿನ ಹಡಗಲಿ, 14ರಂದು ಕೊಟ್ಟೂರು, 21ರಂದು ಹಗರಿಬೊಮ್ಮನಹಳ್ಳಿ ಹಾಗೂ 28ರಂದು ಹರಪನಹಳ್ಳಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾ.7ರಂದು ಹೊಸಪೇಟೆಯಲ್ಲಿ ‘ಮಹಿಳಾ ಘನತೆ ಆಯಾಮಗಳು’ ಎಂಬ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಅಂದು ಸಂಜೆ ಅಂಬೇಡ್ಕರ್ ವೃತ್ತದಲ್ಲಿ ಮೌನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಮಾ.8ರಂದು ಪಟೇಲ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರಗೆ ಹಕ್ಕೊತ್ತಾಯ ಜಾಥಾ ನಡೆಯಲಿದೆ ಎಂದು ತಿಳಿಸಿದರು.

ಟಿಎಂಸಿ ಮೇಲ್ವಿಚಾರಣೆ ಸಮಿತಿಯ ಸರೋಜಾ ಹವಲ್ದಾರ್, ಪ್ರಮುಖರಾದ ದೇವಕ್ಕ, ಲಕ್ಷ್ಮೀದೇವಿ, ರೇಖಾಂಬ, ಲಿನೆಟ್, ಆಶಾಲತಾ, ಕೃತಿ. ನೇತ್ರಾ, ಚಿನ್ನಾಪುರಮ್ಮ, ಸರೋಜಾ ಹವಳದ, ಸೋಮಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net