ಸಹಬಾಳ್ವೆ, ಲೋಕಹಿತದ ಶಿಕ್ಷಣ ಅತ್ಯವಶ್ಯಕವಾಗಿದೆ: ಸ್ವಾಮಿ ಮುಕ್ತಿದಾನಂದ ಜೀ

ಸಹಬಾಳ್ವೆ, ಲೋಕಹಿತದ ಶಿಕ್ಷಣ ಅತ್ಯವಶ್ಯಕವಾಗಿದೆ: ಸ್ವಾಮಿ ಮುಕ್ತಿದಾನಂದ ಜೀ
Published on

ಹಾಸನ: ನಮ್ಮ ಆರೋಗ್ಯದ ರಕ್ಷಣೆಗೆ ನಾವೇ ಜವಾಬ್ದಾರಿ ತೆಗೆದುಕೊಳ್ಳುವ ರೀತಿಯಲ್ಲಿ, ನಮ್ಮ ಭಾರತೀಯ ಶಿಕ್ಷಣದ ಉನ್ನತಿಯ ರಕ್ಷಣೆ, ಬಿತ್ತರದ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದು ಎಂದು ಮೈಸೂರಿನ ರಾಮಕೃಷ್ಣ ಆಶ್ರಮ ಮತ್ತು ರಿಮ್ಸೆಯ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಜೀ ಅಭಿಪ್ರಾಯಪಟ್ಟರು.

ನಗರದ ಸಂಸ್ಕೃತ ಸಂಘವು ಸೋಮವಾರ ಆಯೋಜಿಸಿದ್ದ ಭಾರತಿದರ್ಶನ ಭಾರತೀಯತೆಯ ಪರಿಚಯ ಉಪನ್ಯಾಸ ಮಾಲಿಕೆಯಲ್ಲಿ ಭೂತ-ಭವಿಷ್ಯತ್-ವರ್ತಮಾನದಲ್ಲಿ ಭಾರತೀಯ ಶಿಕ್ಷಣ ಕುರಿತು ಆಗಸ್ಟ್ ತಿಂಗಳ ಉಪನ್ಯಾಸ ನೀಡಿದ ಅವರು, ಇಂದು ಕೇವಲ ಆಹಾರ ಮತ್ತು ಸಂಪತ್ತಿನ ಗಳಿಕೆಗೆ ಪೂರಕವಾಗುವ ಶಿಕ್ಷಣವನ್ನು ಮಾತ್ರ ನೀಡುತ್ತಿದ್ದೇವೆ. ಆದರೆ ನಾವು ಕಲಿಸಬೇಕಾದ್ದು ಜೀವನ ವಿಜ್ಞಾನ. ಅದು ಲೋಕಹಿತದ ದೃಷ್ಟಿಯಲ್ಲಿರಬೇಕು. ಇದು ಸಹಬಾಳ್ವೆಗೆ ಪೂರಕ. ಇದು ಭಾರತೀಯ ಶಿಕ್ಷಣದ ಮೂಲತತ್ತ್ವ, ಸತ್ವ ಎಂದರು.

ರಾಮ-ಲಕ್ಷ್ಮಣರು ರಾಜಪುತ್ರರಾಗಿದ್ದರೂ ಅವರ ಮುಂದಿನ ಜೀವನಕ್ಕೆ ಬೇಕಾಗುವ, ಲೋಕ ರಕ್ಷಣೆ ಮಾಡುವ, ಸನ್ನಡತೆಯ ಲೋಕ ಶಿಕ್ಷಣ ದೊರೆತದ್ದು ವಸಿಷ್ಠ, ವಿಶ್ವಾಮಿತ್ರರಿಂದ. ಆ ಶಿಕ್ಷಣವೂ ಗುರುಗಳಿಂದ ಪ್ರಾಯೋಗಿಕವಾಗಿ, ನಿತ್ಯದ ಚರ್ಯೆಗಳ ಮೂಲಕ ದೊರೆತದ್ದು. ರಾಜಕುಮಾರರಿಗೂ ಸುಲಭವಾಗಿ ದೊರೆತದ್ದಲ್ಲ. ಇಂದು ಶಿಕ್ಷಣ ಕೇವಲ ಪುಸ್ತಕ ಜ್ಞಾನದ ಶಿಕ್ಷಣವಾಗಿದೆ. ಹೆಚ್ಚು ಅಂಕ ಗಳಿಸಿದವನು ವಿದ್ಯಾವಂತ, ಬುದ್ಧಿವಂತ ಎನ್ನುವಂತಾಗಿದೆ. ಇದು ಸರಿಯೇ ಎಂಬುದನ್ನು ಗಮನಿಸಬೇಕು ಎಂದು ಸೋದಾಹರಣವಾಗಿ ವಿವರಿಸಿದರು.

ಹೊರಗಿನವರನ್ನು ಅನುಕರಿಸಿ ನೀಡುತ್ತಿರುವ ಶಿಕ್ಷಣದಲ್ಲಿ ಭಾರತೀಯ ಸತ್ವದ ತಳಹದಿಯ ಸತ್ಯಂ ವದ, ಧರ್ಮಂ ಚರ ಎನ್ನುವ ಶಿಕ್ಷಣ ಮರೆಯಾಗುತ್ತಿದೆ. ಇದನ್ನು ಮರೆತೇ ಬೆಳೆಯುವ ವಿದ್ಯಾರ್ಥಿ, ಮುಂದೆ ಎಂತಹ ಪ್ರಜೆ ಆಗಬಲ್ಲ ಎನ್ನುವುದನ್ನು ಚಿಂತಿಸಬೇಕು. ಆದ್ದರಿಂದ ಸಂಸ್ಕಾರವನ್ನು ಕೊಡುವುದು ಬಹು ಮುಖ್ಯವಾಗಿ ಪ್ರತಿಯೊಬ್ಬ ಪೋಷಕರ, ಶಿಕ್ಷಕರ ಜವಾಬ್ದಾರಿ. ಅವರು ತಮ್ಮ ನಡತೆಯಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ವಿದೇಶಗಳಲ್ಲಿ ಇರುವ ರಾಮಕೃಷ್ಣ ಆಶ್ರಮದ ಶಾಖೆಗಳಲ್ಲಿ ಅಲ್ಲಿಯ ಮಂದಿ ಇಂತಹ ಮೌಲ್ಯಗಳು ಬೇಕೆಂದು ಬಯಸಿ ಅಲ್ಲಿಗೆ ಬರುವುದು ಸರ್ವೇ ಸಾಮಾನ್ಯವಾಗಿದೆ ಮತ್ತು ಕಲಿತು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಸಂಸ್ಕೃತವನ್ನೂ ಕಲಿಯುತ್ತಿದ್ದಾರೆ. ಇದನ್ನು ನೋಡಿದಾಗ ಭಾರತೀಯ ಶಿಕ್ಷಣ ಹಿಂದಿನ ಕಾಲದಲ್ಲಿ ಭಾರತದಲ್ಲಿ ಗಟ್ಟಿಯಾಗಿತ್ತು. ವರ್ತಮಾನದಲ್ಲಿ ಹೊರದೇಶಗಳಲ್ಲಿ ಕಂಡುಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸ್ಕೃತಮ್‌ನ ಶಾರದಾಗ್ರಂಥಲೋಕಕ್ಕೆ ರಾಮಕೃಷ್ಙಾಶ್ರಮದ ಪ್ರಕಟಣೆಯ 95 ಪುಸ್ತಕಗಳನ್ನು ಸ್ವಾಮೀಜಿಯವರೂ, ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಬಿ.ಎನ್. ಅರುಣ್‌ಕುಮಾರ್ ಪರಿವಾರದವರು ಭಾರತದರ್ಶನ ಸಂಸ್ಥೆಯ ಮಹಾಭಾರತದ 32 ಸಂಪುಟಗಳನ್ನು ಕೊಡುಗೆಯಾಗಿ ನೀಡಿದರು.

ಸಂಸ್ಕೃತ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ, ಕಾರ್ಯದರ್ಶಿ ಪರಮೇಶ್ವರ. ವಿ. ಭಟ್, ಡಾ. ಅನೂಪ್, ಹುಲುಗುಂಡಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ ಲಕ್ಷ್ಮೀಕಾಂತ್, ಉದ್ಯಮಿ ಪ್ರಕಾಶ್ ಎಸ್. ಯಾಜಿ, ಶಿಕ್ಷಕ ಮಂಜುನಾಥ್ ಗಾಂವ್ಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net