ಸಹನೆ ಗುಲಾಮಗಿರಿಯಾಗದಿರಲಿ

UPBR 1
Published on

ಉಪ್ಪಿನಬೆಟಗೇರಿ: ಸಹನೆಗೆ ಒಂದು ಮಿತಿ ಇರುತ್ತದೆ. ಸಹನೆಯ ಮೀತಿ ಮೀರಿದಾಗ ಅನ್ಯಾಯವನ್ನು ಪ್ರಶ್ನಿಸಲೇಬೇಕು. ಎಲ್ಲವನ್ನೂ ಸಹಿಸಿಕೊಂಡು ಹೊರಟರೆ ನಾವು ಇತರರಿಗೆ ಗುಲಾಮರಾಗಿಯೇ ಬದುಕಬೇಕಾಗುತ್ತದೆ ಎಂದು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಶಕ್ತಿ ಕೇಂದ್ರದ ರಜತ ಮಹೋತ್ಸವ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ಅನ್ಯಾಯವನ್ನು ಧೈರ್ಯವಾಗಿ ಎದುರಿಸುವ ಗುಣ ಭಾರತೀಯರಲ್ಲಿ ಇಲ್ಲದ್ದರಿಂದ ಬ್ರಿಟಿಷರು ಸೇರಿ ಇತರರು ಭಾರತವನ್ನು ಆಳಿದ್ದಾರೆ. ಮಕ್ಕಳಲ್ಲಿ ಅನ್ಯಾಯವನ್ನು ಎದುರಿಸುವ ಗುಣ ಬೆಳೆಸಬೇಕು. ಆದರೆ ಈಗಿನ ಪಾಲಕರು, ‘ಯಾರ ತಂಟೆಗೂ ಹೋಗದಿರಿ. ಯಾರಾದರೂ ಹೊಡೆದರೆ ಹೊಡೆಸಿಕೊಂಡು ಮನೆಗೆ ಬಾ’ ಎಂದು ಮಕ್ಕಳಿಗೆ ಹೇಳುತ್ತಿದ್ದಾರೆ. ಈ ಪ್ರವೃತ್ತಿ ತೊಲಗಬೇಕು ಎಂದರು.

ಹಣದ ಆಸೆಗೆ ನಮ್ಮನ್ನು ನಾವು ಮಾರಿಕೊಂಡು ಕೊಳ್ಳೆ ಹೊಡೆಯುವ ವ್ಯಕ್ತಿಗಳನ್ನು ಚುನಾಯಿಸಿ ಅವರ ಗುಲಾಮರಾಗಿ ಬದುಕುವ ಬದಲು ದೇಶವನ್ನು ಮುನ್ನಡೆಸಬಲ್ಲವರನ್ನು ನಮ್ಮ ನಾಯಕರನ್ನಾಗಿಸಬೇಕು ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ತಡಕೋಡ ವಿಶಿಷ್ಟವಾದ ಗ್ರಾಮವಾಗಿದ್ದು, ಈ ಗ್ರಾಮದ ಯುವಕರಲ್ಲಿ ಅದಮ್ಯವಾದ ಶಕ್ತಿ ಇದೆ. ಎಲ್ಲ ತರನಾದ ಜನರೂ ಇಲ್ಲಿದ್ದಾರೆ. ವಿವೇಕಾನಂದ ಶಕ್ತಿ ಕೇಂದ್ರದ ಯುವಕರು ಇನ್ನುಳಿದ ಯುವಕರಿಗೆ ಮಾರ್ಗದರ್ಶನ ನೀಡುವಂತಾಗಬೇಕು. ಈ ಶಾಖೆಗಳಲ್ಲಿ ಬೆಳೆದ ಪ್ರತಿಯೊಬ್ಬರಲ್ಲೂ ಗಟ್ಟಿತನ ಎದ್ದು ಕಾಣುತ್ತದೆ. ಅವರಂತೆ ಎಲ್ಲ ಯುವಕರು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಳಗ್ಗೆ 6ಕ್ಕೆ ಶ್ರೀ ರಾಮಕೃಷ್ಣರ ಪೂಜೆ, ಹೋಮ-ಪಠಣ, ಭಜನೆ ಹಾಗೂ ಸಾವಿರ ಮಾತೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿತು.

ರಾಮಕೃಷ್ಣ ಮಠಗಳ ಅಧ್ಯಕ್ಷರಾದ ಸ್ವಾಮಿ ವಿಜಯಾನಂದ ಮಹಾರಾಜ್, ಸ್ವಾಮಿ ಮಹೇಶ್ವರಾನಂದ ಮಹಾರಾಜ್, ಸ್ವಾಮಿ ರಘುವೀರಾನಂದ ಮಹಾರಾಜ್, ಸ್ವಾಮಿ ಆತ್ಮದೀಪಾನಂದ, ಸ್ವಾಮಿ ಗುರುದೇವ ಚರಣಾನಂದ, ಸ್ವಾಮಿ ಮೇಧಾನಂದ, ಪ್ರೇಮ ರೂಪಾನಂದ, ತೇಜೋಮಯಿ ಮಾತಾಜಿ, ಕಲ್ಲೂರ ಆರೂಢ ಆಶ್ರಮದ ಲಲಿತಮ್ಮ ತಾಯಿ, ಅಶೋಕ ದೇಸಾಯಿ, ತಾಲೂಕು ಹಾಗೂ ಗ್ರಾಪಂ ಸದಸ್ಯರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಯುವಕರು, ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಧರು, ಮಾಜಿ ಯೋಧರು, ಗ್ರಾಮದ ಮುಖಂಡರು, ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ನಂತರ ಅನ್ನ ಸಂತರ್ಪಣೆ ಜರುಗಿತು.

ಒಂದೇ ವೇದಿಕೆಯಲ್ಲಿ ಐವರು! : ಒಂದೇ ಗ್ರಾಮ ಹಾಗೂ ಒಂದೇ ಶಾಲೆಯಲ್ಲಿ ಕಲಿತ ಎಂಟು ವಿದ್ಯಾರ್ಥಿಗಳು ಕಾವಿಧಾರಿಗಳಾಗಿ ರಾಜ್ಯದ ವಿವಿಧೆಡೆಯಲ್ಲಿ ಇರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾಗಿದ್ದಾರೆ. ಅದರಲ್ಲಿ ಐವರು ಮಂಗಳವಾರ ಒಂದೇ ವೇದಿಕೆಯಲ್ಲಿ ಇದ್ದಿದ್ದು ವಿಶೇಷವಾಗಿತ್ತು. ಕಲಬುರಗಿಯ ಮಹೇಶ್ವರಾನಂದ ಮಹಾರಾಜ್, ಕೊಪ್ಪಳದ ಚೈತನ್ಯಾನಂದ ಮಹಾರಾಜ್, ರಾಣೆಬೆನ್ನೂರಿನ ಪ್ರಕಾಶಾನಂದ ಮಹಾರಾಜ್, ಹೊಸಪೇಟೆಯ ಸುಮೇಧಾನಂದ ಮಹಾರಾಜ್, ಗದಗನ ಜಗನ್ನಾಥಾನಂದ ಮಹಾರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net