ಸಹಜ ಸ್ಥಿತಿಗೆ ಮರಳಿದ ಕೊಡಗು : ಮೊಟ್ಟೆ ಎಸೆದ ಪ್ರಕರಣದಿಂದ ಉದ್ವಿಗ್ನವಾಗಿದ್ದ ಮಂಜಿನ ನಗರಿ

26mdka2
Published on

ಮಡಿಕೇರಿ : ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಳಿಕ ಉದ್ವಿಗ್ನ ಸ್ಥಿತಿಯಲ್ಲಿದ್ದ ಕೊಡಗು ಸಹಜ ಸ್ಥಿತಿಗೆ ಮರಳಿದೆ. ಆ.26 ರಂದು ನಡೆಸಲು ಉದ್ದೇಶಿಸಿದ್ದ ಮಡಿಕೇರಿ ಚಲೋ (ಕಾಂಗ್ರೆಸ್), ಜನಜಾಗೃತಿ ಸಮಾವೇಶ (ಬಿಜೆಪಿ) ಕೈಬಿಟ್ಟಿದ್ದರಿಂದ ಆತಂಕ ದೂರವಾಗಿದೆ.


ಆ.26 ರಂದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್- ಬಿಜೆಪಿ ಪ್ರತ್ಯೇಕವಾಗಿ ಸಹಸ್ರಾರಾರು ಸಂಖ್ಯೆಯಲ್ಲಿ ಜನರನ್ನು ಮಡಿಕೇರಿಯಲ್ಲಿ ಸೇರಿಸಲು ಉದ್ದೇಶಿಸಿದ್ದವು. ಆ ಮೂಲಕ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿತ್ತು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಶಿಫಾರಸಿನನ್ವಯ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು 24 ರಂದು ಬೆಳಗ್ಗೆ 6ರಿಂದ 27 ರಂದು ಬೆಳಗ್ಗೆ 6 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದರು..


ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕಾಂಗ್ರೆಸ್- ಬಿಜೆಪಿ ಉದ್ದೇಶಿತ ಕಾರ್ಯಕ್ರಮ ಕೈಬಿಟ್ಟವು. ಹೀಗಿದ್ದರೂ, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಎರಡು ದಿನ ಕೊಡಗಿನಲ್ಲಿಯೇ ಇದ್ದು, ಶಾಂತಿ- ಸುವವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡರು. ನಿಷೇಧಾಜ್ಞೆ ಅವಧಿಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಕೊಡಗಿನಲ್ಲಿಯೇ ಬೀಡು ಬಿಟ್ಟಿದ್ದರು.


ಶುಕ್ರವಾರ ಜಿಲ್ಲೆಯ ಬಹುತೇಕ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು. ಕೊಡಗಿಗೆ ಪ್ರವೇಶಿಸಿವ ಸ್ಥಳಗಳಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ ವಿಶೇಷ ನಿಗಾ ವಹಿಸಲಾಗಿತ್ತು. ಕೇರಳ ಗಡಿಭಾಗದಲ್ಲಿರುವ ಕರಿಕೆ, ಮಾಕುಟ್ಟ, ಕುಟ್ಟ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ಹೆಚ್ಚು ಮುತುವರ್ಜಿ ವಹಿಸಿದ್ದರು.

ಮಡಿಕೇರಿ ಸಂತೆ ರದ್ದು :
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಮಡಿಕೇರಿಯ ವಾರದ ಸಂಜೆ ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾದೇವಪೇಟೆಯಲ್ಲಿರುವ ಸಂತೆ ಸಭಾಂಗಣಕ್ಕೆ ಬೀಗ ಹಾಕಲಾಗಿತ್ತು. ಆದರೆ, ಮಹಾದೇವಪೇಟೆ ಭಾಗದಲ್ಲಿರುವ ಅಂಗಡಿ- ಮುಂಗಟ್ಟುಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಮೀನು, ಕೋಳಿ, ಕುರಿ, ಹಂದಿ ಮಾಂಸ ಮಾರಾಟ ಎಂದಿನಂತೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net