

ಮೈಸೂರು: ಮುಂಬಯಿಯ ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರಿಸರ್ಚ್ (ಎಸ್‌ಪಿಜೆ ಐಎಂಆರ್)ನಿಂದ ನೀಡಲಾಗುವ ಪ್ರತಿಷ್ಠಿತ ‘ಸೋಷಿಯಲ್ ಇಂಪಾಕ್ಟ್ ಅವಾರ್ಡ್’ ಗೆ ಮೈಸೂರು ಮೂಲದ ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿ ಭಾಜನವಾಗಿದೆ.
ಕೃಷಿ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕಂಪನಿಗೆ ‘ಸಾಮಾಜಿಕ ಪರಿಣಾಮ ಪ್ರಶಸ್ತಿ’ ನೀಡಲಾಗುತ್ತದೆ. ಸಹಜ ಸೀಡ್ಸ್ ಬ್ರಾೃಂಡ್ ಮೂಲಕ ದೇಸಿ ಬೀಜಗಳನ್ನು ಮಾರಾಟ ಮಾಡುತ್ತಿರುವ ರೈತರ ಮಾಲಿಕತ್ವದ ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿಯ ನಾಡು ತಳಿ ಬೀಜ ಸಂರಕ್ಷಣೆ, ರೈತರ ಆದಾಯ ಹೆಚ್ಚಳ, ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಒಂದು ಲಕ್ಷ ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುವ ಈ ಪ್ರಶಸ್ತಿಯನ್ನು ಮುಂಬಯಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ರೋಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಪ್ರಶಸ್ತಿ ವಿತರಿಸಿದರು. ಸಹಜ ಸೀಡ್ಸ್ ಪರವಾಗಿ, ಸಂಸ್ಥಾಪಕಿ ಸೀಮಾ ಪ್ರಸಾದ್, ನಿರ್ದೇಶಕ ಸಿದ್ದನಹುಂಡಿ ಶ್ರೀನಿವಾಸ ಮೂರ್ತಿ, ಬೀಜೋತ್ಪಾದನಾ ವಿಭಾಗದ ಮುಖ್ಯಸ್ಥ ಕೆ.ಎಸ್. ಮಂಜು ಪ್ರಶಸ್ತಿಯನ್ನು ಸ್ವೀಕರಿಸಿದರು.
ರೈತರಿಗೆ ಲಾಭ ಹಂಚಿಕೆ:
ಮೈಸೂರು, ಮಂಡ್ಯ, ಮತ್ತು ಚಾಮರಾಜನಗರ ಜಿಲ್ಲೆಗಳ 56 ಬೀಜ ಉತ್ಪಾದಕರು ಮತ್ತು 10 ಮಹಿಳಾ ಸಂಘಗಳು 200ಕ್ಕೂ ಹೆಚ್ಚು ನಾಡ ತಳಿಯ ಬೀಜೋತ್ಪಾದನೆಯಲ್ಲಿ ಸಕ್ರಿಯವಾಗಿವೆ. 2023-24 ಹಣಕಾಸು ವರ್ಷದಲ್ಲಿ, ಸಹಜ ಸೀಡ್ಸ್ 1.25 ಕೋಟಿ ರೂ. ಮೌಲ್ಯದ ದೇಸಿ ಬೀಜಗಳನ್ನು ಮಾರಾಟ ಮಾಡಿ, 20 ಲಕ್ಷ ರೂ. ಲಾಭ ಗಳಿಸಿದೆ. ಬಂದ ಲಾಭವನ್ನು ಪ್ರತಿವರ್ಷ ರೈತರಿಗೆ ಹಂಚಿಕೆ ಮಾಡುವುದು ಸಹಜ ಸೀಡ್ಸ್ ಹೆಗ್ಗಳಿಕೆ.
ರೈತರ ಮಾಲೀಕತ್ವದ ಬೀಜ ಕಂಪನಿಯನ್ನು ಆರಂಭಿಸಿ ಬೀಜ ಸ್ವಾತಂತ್ರ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ನಮ್ಮ ಪ್ರಯತ್ನ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆ ತಂದಿದೆ. ದೇಸಿ ಬೀಜ ಮತ್ತು ಕೃಷಿ ವೈವಿಧ್ಯವನ್ನು ಜನಪ್ರಿಯಗೊಳಿಸುವ ನಮ್ಮ ಕೆಲಸಗಳಿಗೆ ಸ್ಫೂರ್ತಿ ಸಿಕ್ಕಿದೆ ಎಂದು ಸಹಜ ಸೀಡ್ಸ್ ಸಂಸ್ಥಾಪಕ ಜಿ. ಕೃಷ್ಣ ಪ್ರಸಾದ್ ಹರ್ಷ ವ್ಯಕ್ತಪಡಿಸಿದ್ದಾರೆ.