ಸಹಜ ಬದುಕಿಗೆ ಆದ್ಯತೆ ನೀಡಿ

11 vikram 4
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಮಾನಸಿಕ ಒತ್ತಡದಿಂದ ಕಾಯಿಲೆಗೆ ಈಡಾಗುವುದು ಸಾಮಾನ್ಯ. ರಾಸಾಯನಿಕ ಗೊಬ್ಬರಗಳ ಬಳಕೆ, ಹಣ ಗಳಿಕೆ ಬೆಳೆಗಳಿಂದ ಭೂಮಿಯಲ್ಲಿ ಬೆಳೆಯುವ ಬೆಳೆಗಳೂ ವಿಷಕಾರಿ ಆಗುತ್ತಿವೆ. ನಾವೆಲ್ಲ ಊಟದ ರೂಪದಲ್ಲಿ ವಿಷ ಸೇವಿಸುತ್ತಿರುವುದಿಂದ ರೋಗಪೀಡಿತರಾಗುತ್ತಿದ್ದೇವೆ ಎಂದು ಆಯುರ್ವೇದ ವೈದ್ಯ ಡಾ. ಮಹೇಂದ್ರ ಕೌಲಗುಡ್ಡ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಆಯುರ್ವೇದದ ಮಹತ್ವ’ ಕುರಿತು ಉಪನ್ಯಾಸ ನೀಡಿದರು.
ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಕ್ಕೆ ಮಹತ್ವವಿದ್ದು, ವೇದದ ಉಪಅಂಗಗಳಲ್ಲಿ ಆಯುರ್ವೇದವೂ ಒಂದು. ರಾಸಾಯನಿಕ ಔಷಧಿಗಳ ಆವಿಷ್ಕಾರದಿಂದ ಪ್ರಕೃತಿಯಲ್ಲಿ 21 ಬಗೆಯ ಕಲುಷಿತ ವಾತಾವರಣ ನಿರ್ಮಾಣಗೊಂಡಿದೆ. ಗಾಳಿ, ನೀರು, ಮಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಒಳ್ಳೆ ಹವೆ, ನೀರು ಸಿಗದಂತಾಗಿದೆ. ಮನುಷ್ಯ ಆಡಂಬರದ ಬದುಕಿಗೆ ಒಳಗಾಗದೆ ಸಹಜವಾಗಿವಾಗಿದ್ದರೆ ರೋಗ ಮುಕ್ತನಾಗಿರುತ್ತಾನೆ. ದೀರ್ಘ ಕಾಲ ರೋಗ ತಡೆಗಟ್ಟುವ ಶಕ್ತಿ ಆಯುರ್ವೇದಕ್ಕೆ ಇದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಹೋಮಿಯೋಪಥಿ ವೈದ್ಯೆ ಡಾ. ಪಾರ್ವತಿ ಹಾಲಭಾವಿ ಮಾತನಾಡಿ, ಮನುಷ್ಯನಲ್ಲಿ ಚೈತನ್ಯ ಶಕ್ತಿ ಕಡಿಮೆಯಾದರೆ ರೋಗ ಲಕ್ಷಣ ಕಾಣುತ್ತದೆ. ತಿನ್ನುವ ಆಹಾರ, ತಯಾರಿಸುವ ವಿಧಾನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಆಯುರ್ವೇದ, ಹೋಮಿಯೋಪಥಿ, ಅಲೋಪಥಿ ಯಾವುದಿದ್ದರೂ ಮನುಷ್ಯನ ಆರೋಗ್ಯದ ರಕ್ಷಣೆಗೆ ಬೆಳೆದು ಬಂದ ವೈದ್ಯಕೀಯ ಪದ್ಧತಿಗಳಾಗಿವೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ. ಅರುಣಕುಮಾರ ಶಿರಹಟ್ಟಿ, ಮಹೇಶ ಹೊರಕೇರಿ, ಡಾ. ಶಾಂತರಾಜ ಮಲ್ಲಸಮುದ್ರ, ಚಿನ್ನಮ್ಮ ಶಿರಹಟ್ಟಿ, ಸುಜಾತಾ ಹಡಗಲಿ, ಕೆ.ಎಚ್.ನಾಯಕ, ಸುರೇಶ ಹಾಲಭಾವಿ, ಮಹಾಂತೇಶ ನರೇಗಲ್, ಎಂ.ಎಂ. ಚಿಕ್ಕಮಠ, ಮಹಾವೀರ ಉಪಾಧ್ಯೆ, ಸಂಗಯ್ಯ ಶಿವಪ್ಪಯ್ಯನಮಠ, ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ನವೀನಶಾಸ್ತ್ರಿ ಪುರಾಣಿಕ ನಿರೂಪಿಸಿದರು. ಡಾ. ವೀಣಾ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net