ಸಹಕಾರಿ ಸಂಘಗಳು ಗುಣಮಟ್ಟದ ಸೇವೆ ನೀಡಲಿ: ಜಿ.ನಂಜನಗೌಡ ಆಶಯ

3
Published on

ಮೈಸೂರು:ಸಹಕಾರ ಸಂಘಗಳು ಸಂಖ್ಯೆಯ ಬೆಳವಣಿಗೆಗಿಂತ ಗುಣಮಟ್ಟದ ಸೇವೆ ನೀಡುವ ಕಡೆ ಗಮನ ನೀಡಬೇಕಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ನಂಜನಗೌಡ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚಾಗಿ ಬೆಳೆಯುತ್ತಿವೆ. ಇದು ಸಂತೋಷದ ವಿಷಯವಾದರೂ ಸಂಖ್ಯೆಗಿಂತ ಗುಣಮಟ್ಟದ ಕಡೆಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಯುಕ್ತ ಸಹಕಾರಿ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಸಹಕಾರಿಗಳು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿ ತಮ್ಮ ಸಹಕಾರ ಸಂಸ್ಥೆಗಳನ್ನು ಮುನ್ನಡೆಸಬೇಕು. ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತವಾರಣವಿದೆ. ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರ ಚಳವಳಿ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಹಕಾರ ಕ್ಷೇತ್ರಕ್ಕೂ ಈಗ ರಾಜಕೀಯ ಪ್ರವೇಶ ಮಾಡಿದ್ದು, ಈ ರಂಗದಲ್ಲಿಯೂ ಸ್ವಾರ್ಥಿಗಳು ಹೆಚ್ಚಿದ್ದಾರೆ. ಇದರಿಂದ ಅಲ್ಲಲ್ಲಿ ಹಣ ದುರುಪಯೋಗ ಆಗುತ್ತಿರುವ ದೂರುಗಳಿವೆ. ಸಹಕಾರ ಕ್ಷೇತ್ರಗಳನ್ನು ನೆಚ್ಚಿಕೊಂಡು ಹೂಡಿಕೆ ಮಾಡಿರುವವರಿಗೆ ಷೇರು ಬಂಡಾವಾಳ ಹೆಚ್ಚಾಗುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸ್ಥಾಪನೆಗೊಂಡ 22 ವರ್ಷಗಳಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ದೊಟ್ಟ ಮಟ್ಟದಲ್ಲಿ ಬೆಳೆದಿದೆ. ರಾಜ್ಯದಲ್ಲಿ 6000ಕ್ಕೂ ಹೆಚ್ಚು ಸದಸ್ಯರು ಸೌಹಾರ್ದ ಸಹಕಾರಿ ನಿಯಮಿತದಡಿ ಇದ್ದಾರೆ. ಅತಿ ಹೆಚ್ಚು ಇ- ಸ್ಟ್ಯಾಂಪಿಂಗ್ ಕೇಂದ್ರಗಳು ನಮ್ಮ ಸಹಕಾರ ಸಂಘಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ಹೆಚ್ಚು ರಾಜಸ್ವ ನೀಡುತ್ತಿವೆ ಎಂದು ಹೇಳಿದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಶಿಕ್ಷಣ ಮತ್ತು ಸಲಹಾ ಸಮಿತಿ ಸದಸ್ಯ ಎಚ್.ವಿ.ರಾಜೀವ್ ಮಾತನಾಡಿ, ನಮ್ಮ ದೇಶದ ಆರ್ಥಿಕತೆಗೆ ಸಹಕಾರ ಸಂಘಗಳು ತಮ್ಮದೇ ಕೊಡುಗೆ ನೀಡುತ್ತಿವೆ. ಇದರಿಂದ ಜನರ ಆರ್ಥಿಕ ಮಟ್ಟ ಸುಧಾರಿಸಿದೆ. ಸಹಕಾರ ಚಳವಳಿ ಬಲಿಷ್ಠ ಹಾಗೂ ವಿಸ್ತಾರಗೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದರು.
ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಮಾತನಾಡಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸೌಹಾರ್ದ ಸಂಯುಕ್ತ ಸಹಕಾರಿ ಅಡಿಯ ಸಂಸ್ಥೆಗಳು, ಗ್ರಾಹಕರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಆ. 29ರಂದು ಸೌಹಾರ್ದ ಸಹಕಾರಿ ಸಾಮಾನ್ಯ ಸಭೆ ಇದ್ದು, ಎಲ್ಲರೂ ಕ್ರಿಯಾಶೀಲರಾಗಿ ಭಾಗವಹಿಸುವುದಲ್ಲದೆ, ಬೆಳವಣಿಗೆ ದೃಷ್ಟಿಯಿಂದ ಸಲಹೆ- ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಸಹಕಾರಿ ಯೂನಿಯನ್ ಉಪನಿರ್ದೇಶಕ ಎ.ಆರ್.ಶ್ರೀನಾಥ್ ಅವರು ಸಹಕಾರಿ ಸಂಘಗಳ ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು. ಮೈಸೂರು, ಮಂಡ್ಯ, ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್.ನಾರಾಯಣರಾವ್, ನಿರ್ದೇಶಕ ಎಚ್.ಎನ್.ನವೀನ್, ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ ಬಿರಾದಾರ, ಸೋಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net