

ಚಡಚಣ: ನಿಷ್ಠೆ, ಪ್ರಾಮಾಣಿಕತೆ ಹಾಗೂ ಹೊಸತನದ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಪಟ್ಟಣದ ಫಂಡರಪುರ ರಸ್ತೆಯ ಮಾಲಾಪುರ ಕಾಂಪ್ಲೆಕ್ಸ್‌ನಲ್ಲಿ ದಿ.ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನೂತನ ಚಡಚಣ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಕೇವಲ ಸಾಲ ಕೊಡುವುದಕ್ಕೆ ಸೀಮಿತವಾಗದೆ ರೈತರಿಗೆ ಕ್ರಿಮಿನಾಶಕ, ಸಾವಯವ ರಸಗೊಬ್ಬರಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಸರಳವಾಗಿ ನೀಡುವ ಮೂಲಕ ಸಂಘವನ್ನು ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಸಿಬ್ಬಂದಿ ಶ್ರಮ ವಹಿಸಬೇಕು ಎಂದು ಹೇಳಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಹಕಾರಿ ಸಂಘಗಳ ಜತೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಮಧ್ಯೆ ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದೆ. ಆದರೂ ಸಹಕಾರಿ ಸಂಘಗಳನ್ನು ಹಿಂದಿಕ್ಕಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಕೋ-ಆಪ್ ಸೊಸೈಟಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವುದರಿಂದ ಸಹಕಾರಿ ಕ್ಷೇತ್ರ ಗಣನೀಯವಾಗಿ ಬೆಳೆಯುತ್ತಿದೆ. ಸಂಘದ ಪ್ರತಿನಿಧಿಗಳು ವೃತ್ತಿಪರ ಶಿಸ್ತು ಹಾಗೂ ಬದ್ಧತೆ ಮೈಗೂಡಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ನಮ್ಮ ಸೊಸೈಟಿಯಿಂದ ತ್ವರಿತವಾಗಿ ಸಾಲ ಪಡೆದುಕೊಳ್ಳಬಹುದು. ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಬ್ಯಾಂಕ್‌ಗಳ ಅಭಿವೃದ್ಧಿ ಸಾಧ್ಯ. ಸಾವಯವ ಪದ್ಧತಿಗಳಲ್ಲಿ ಬೆಳೆಗಳನ್ನು ಬೆಳೆದು ಭೂಮಿಯ ಲವತ್ತತೆ ಕಾಪಾಡಿಕೊಳ್ಳುವುದು, ಸಮಾಜಕ್ಕೆ ವಿಷಮುಕ್ತ ಆಹಾರ ಪೂರೈಸಲು ರೈತರಿಗೆ ಸಾವಯವ ಕಷಿ ಪದ್ಧತಿ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವ ಕಾರ್ಯಾಗಾರ ಮಾಡುತ್ತೇವೆ ಎಂದರು.
ಹತ್ತಳ್ಳಿ-ಹಾವಿನಾಳ ಮಠದ ಗುರುಪಾದೇಶ್ವರ ಸ್ವಾಮೀಜಿ, ಹಾವಿನಾಳ ಮಠದ ವಿಜಯಮಹಾಂತೇಶ್ವರ ಸ್ವಾಮೀಜಿ, ಬಳ್ಳೊಳ್ಳಿಯ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಚಡಚಣ ಶಾಖಾ ಕಚೇರಿ ಅಧ್ಯಕ್ಷೆ ಕಾಶೀಬಾಯಿ ಮಾಲಿಕಾರ, ವಿ.ಪ. ಮಾಜಿ ಸದಸ್ಯ ಬಿ.ಜಿ. ಪಾಟೀಲ (ಹಲಸಂಗಿ), ಪ.ಪಂ. ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಎಂ.ಆರ್. ಪಾಟೀಲ (ಬಳ್ಳೊಳ್ಳಿ), ಖ್ಯಾತ ಜವಳಿ ವ್ಯಾಪಾರಿ ಅಜೀತ ಮುತ್ತಿನ, ಪ.ಪಂ. ಸದಸ್ಯರಾದ ರಾಜು ಕೋಳಿ, ಶ್ರೀಕಾಂತ ಗಂಟಗಲ್ಲ, ಚೇತನ ನಿರಾಳೆ, ಗೌಸಪಾಕ ಟಪಾಲ, ಮುಖಂಡರಾದ ಸಾಹೇಬಗೌಡ ಬಿರಾದಾರ, ಆರ್.ಡಿ. ಹಕ್ಕೆ, ವಿ.ಜಿ. ಮುತ್ತಿನ ಇತರರಿದ್ದರು.