

ನರಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನಲ್ಲಿಟ್ಟಿದ್ದ 1. 49 ಲಕ್ಷ ರೂ. ಕಳ್ಳತನವಾದ ಘಟನೆ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ತೋಟದಕೆರೆ ಪಕ್ಕದ ಹಳೇ ಎಪಿಎಂಸಿ ಆವರಣದಲ್ಲಿರುವ ಸಹಕಾರಿ ಬ್ಯಾಂಕ್ ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಭಾನುವಾರ ಮತ್ತು ಸೋಮವಾರ ಬ್ಯಾಂಕ್ಗೆ ರಜೆ ಇರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಬಂದಿರಲಿಲ್ಲ. ಈ ವೇಳೆ ಬ್ಯಾಂಕ್ ಹಿಂಬದಿ ಕಿಟಕಿ ಮುರಿದು ಒಳಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ವ್ಯವಸ್ಥಾಪಕ ಉಮೇಶಗೌಡ ಪಾಟೀಲ ಕರ್ತವ್ಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.