

ಬೈಲಹೊಂಗಲ: ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಾಜಿ ಶಾಸಕ ದಿ.ರಮೇಶ ಬಾಳೇಕುಂದರಗಿ ಅವರು ಸ್ಥಾಪಿಸಿದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಸೆ.10ರಂದು ನಡೆಯಲಿದೆ. ರೈತರ, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರೈತ ಸದಸ್ಯರು, ಬಾಳೇಕುಂದರಗಿ ಸಹಕಾರಿ ಪ್ಯಾನಲ್‌ಗೆ ಮತ ಚಲಾಯಿಸಿ ಎಂದು ಮುಖಂಡ ಬಸವರಾಜ ರಮೇಶ ಬಾಳೇಕುಂದರಗಿ ಮನವಿ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ದಿ.ರಮೇಶ ಬಾಳೇಕುಂದರಗಿ ಅವರು ಈ ಭಾಗದ ರೈತರ ಶ್ರೇಯೋಭಿವೃದ್ಧಿಗೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸೋಮೇಶ್ವರ ಕಾರ್ಖಾನೆ ಸ್ಥಾಪಿಸಿದರು. ಅವರ ನಿಧನದ ನಂತರ ನಾನು ಶ್ರಮಪಟ್ಟು ಕಾರ್ಖಾನೆ ಪ್ರಾರಂಭಿಸುವಲ್ಲಿ ಯಶಸ್ವಿಯಾದೆ. ಅಪೆಕ್ಸ್ ಬ್ಯಾಂಕ್ ಸಾಲಕ್ಕೆ ಪ್ರತಿಯಾಗಿ ಕಾರ್ಖಾನೆ ಸವಾಲು ಮಾಡುತ್ತಿರುವುದನ್ನು ತಪ್ಪಿಸಿದೆ.ಕಾರ್ಖಾನೆಯ ಉಳಿವಿಗಾಗಿ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲು ಆಡಳಿತ ಮಂಡಳಿ ಸಹಕಾರ ನೀಡದ್ದರಿಂದ ನಾನು ರಾಜೀನಾಮೆ ನೀಡಿದೆ ವಿನಾ ಯಾವುದೇ ಕಾರಣವಿಲ್ಲ ಎಂದರು.
ನಮ್ಮ ಪ್ಯಾನಲ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಮಹಾಂತೇಶ ಕೌಜಲಗಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ವಿ.ಪ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಸಹಕಾರ ಸಿಗಲಿದೆ. ಕಾರ್ಖಾನೆಯ ಮತದಾರರು ಕಾರ್ಖಾನೆಯ ಹಿನ್ನೋಟ ಮತ್ತು ಮುನ್ನೋಟದ ಚಿಂತನ-ಮಂಥನ ಮಾಡಿ ಬಾಳೇಕುಂದರಗಿ ಪ್ಯಾನಲ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಂಕರೆಪ್ಪಣ್ಣ ತುರಮರಿ, ಅಭ್ಯರ್ಥಿಗಳಾದ ರಾಜು ಕುಡಸೋಮನ್ನವರ, ಅಶೋಕ ಬಾಳೇಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಪ್ರದೀಪ ವನ್ನೂರ, ಮಹಾಂತೇಶ ಹೊಸಮನಿ ಇದ್ದರು.