

ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ, ರೈತರ, ಕಾರ್ಮಿಕರ ಹಿತದೃಷ್ಟಿಯಿಂದ ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ ಪ್ಯಾನಲ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಅಭ್ಯರ್ಥಿ ಪ್ರಕಾಶ ಮೂಗಬಸವ ಜಂಟಿ ಹೇಳಿಕೆ ನೀಡಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಖಾನೆ ಸ್ಥಾಪಿಸಲು ದಿ.ರಮೇಶ ಬಾಳೇಕುಂದರಗಿ, ಹಿರಿಯರ ಶ್ರಮದಾನ ಇದ್ದು, ಕಟ್ಟಿದವರ ಹೆಸರು ಅಜರಾಮರವಾಗಿರಬೇಕು. ಶ್ರಮ ವ್ಯರ್ಥವಾಗಬಾರದು ಎಂಬ ಉದ್ದೇಶ ನಮ್ಮದಾಗಿದೆ. ಕಳೆದ ಬಾರಿ 17 ಸದಸ್ಯರಲ್ಲಿ 11 ಸದಸ್ಯರು ನಮ್ಮವರು ಆಯ್ಕೆಯಾಗಿದ್ದರೂ ಕಾರ್ಖಾನೆಗೆ ಚುನಾವಣೆ ನಡೆಸಿ ಹೆಚ್ಚಿನ ಹೊರೆ ನೀಡಬಾರದೆಂದು ಬಸವರಾಜ ಬಾಳೇಕುಂದರಗಿ ಅವರ ಸಮ್ಮತಿಯಂತೆ ಅವಿರೋಧ ಆಯ್ಕೆಗೆ ಸಹಕರಿಸಲು ಒಪ್ಪಿಗೆ ವ್ಯಕ್ತಪಡಿಸಿದ್ದೆವು.
ಅಲ್ಲದೆ ನೀವೇ ಅಧ್ಯಕ್ಷರಾಗಿ ಎಂದು ತಿಳಿಸಿದಾಗಿಯೂ, ಸ್ವತಃ ಪ್ಯಾನಲ್ ರಚಿಸುವೆ ಬೆಂಬಲ ನೀಡಿ ಎಂದೂ ನಮ್ಮನ್ನು ಕಡೆಗಣಿಸಿದರು. ನಂಬಿಕೆಗೆ ದ್ರೋಹ ಬಗೆದಿದ್ದರಿಂದ ಸ್ವಾಭಿಮಾನಕ್ಕಾಗಿ ಹಿರಿಯರೊಂದಿಗೆ ಚರ್ಚಿಸಿ ಚುನಾವಣೆಗೆ ಇಳಿದಿದ್ದೇವೆ ಎಂದರು.
ಸದಸ್ಯರಿಗೆ ನೀಡುವ ಸಕ್ಕರೆ ದರವನ್ನು 25ರಿಂದ 15 ರೂ.ಗೆ ಇಳಿಸಿ, ಕಬ್ಬು ನುರಿಸುವ ಸಾಮರ್ಥ್ಯವನ್ನು 2,500 ಮೆಟ್ರಿಕ್ ಟನ್‌ನಿಂದ 4000 ಸಾವಿರಕ್ಕೆ ಒಂದೇ ವರ್ಷದಲ್ಲಿ ಹೆಚ್ಚಿಸಲಾಗುವುದು. ನಂತರ 5,000ಕ್ಕೆ ಹೆಚ್ಚಿಸಲಾಗುವುದು. ವಿದ್ಯುತ್ ಘಟಕದ ಸಾಮರ್ಥ್ಯವನ್ನು 16 ಮೆ.ವಾಟ್‌ಗೆ ಹೆಚ್ಚಿಸುವ, 100 ಕೆಎಲ್‌ಪಿಒ ಎಥೆನಾಲ್ ಉತ್ಪಾದನೆಯೊಂದಿಗೆ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ ಎಂದರು.
ನಮ್ಮ ಅವಧಿಯಲ್ಲಿ ತೂಕದಲ್ಲಿ ಪಾರದರ್ಶಕತೆ, ಸಾಲ ಸೌಲಭ್ಯ, ಎಥೆನಾಲ್ ಘಟಕ, ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲು ಪರವಾನಗಿ ಸೇರಿ ಕಾರ್ಖಾನೆಯನ್ನು ಕೈಗಾರಿಕಾ ವಲಯಕ್ಕೆ ಹಸ್ತಾಂತರಿಸುವ ಕಾರ್ಯ ಮಾಡಿದ್ದೇವೆ. ಸಂಕಷ್ಟದಲ್ಲೂ ಕಾರ್ಖಾನೆಯನ್ನು ಮುನ್ನಡೆಸಿದ್ದೇವೆ. ನಾವು ಏನೂ ಮಾಡಿಲ್ಲ ಎಂದು ಬಸವರಾಜ ಬಾಳೇಕುಂದರಗಿ ಹೇಳುತ್ತಿರುವುದು ಯಾವ ನ್ಯಾಯ?
ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದರೂ ಅಧ್ಯಕ್ಷ ಸ್ಥಾನ ತ್ಯಜಿಸಿ ಹೊರ ಹೋಗಿದ್ದರು. ಅದಕ್ಕೆಲ್ಲ ಕಾರ್ಖಾನೆಯಲ್ಲಿ ಠರಾವ್ ಮಾಡಿದ ದಾಖಲೆಗಳಿವೆ. ಬಸವರಾಜ ಬಾಳೇಕುಂದರಗಿ ಅವರಿಂದ ಬದಲಾದ ಸ್ಥಿತಿಯಿಂದ ಖೇದವೆನಿಸುತ್ತಿದೆ ಎಂದರು. ಗುರು ಮೆಟಗುಡ್ಡ, ಉಮೇಶ ಬಾಳಿ, ಶ್ರೀಖರ ಕುಲಕರ್ಣಿ, ಮಲ್ಲಯ್ಯ ರುದ್ರಾಪುರ, ಮಹಾಂತೇಶ ಹರಕುಣಿ ಇತರರು ಇದ್ದರು.