ಸಹಕಾರಿ ತತ್ವದಡಿ ನಗರಕೆರೆ ಡೇರಿ ಉತ್ತಮ ಕಾರ್ಯ

20M.D.R.5
Published on

ಮದ್ದೂರು: ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಾ ಸುವರ್ಣ ವರ್ಷಾಚರಣೆಗೆ ದಾಪುಗಾಲು ಇಡುತ್ತಿರುವುದು ಶ್ಲಾಘನೀಯ ಎಂದು ಮನ್‌ಮುಲ್ ನಿರ್ದೇಶಕ ಎಂ.ಕೆ.ಹರೀಶ್ ಬಾಬು ಪ್ರಶಂಸೆ ವ್ಯಕ್ತಪಡಿಸಿದರು.

ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಸುಗಳಿಗೆ ವಿಮೆ ಯೊಜನೆ ಕಾರ್ಯಕ್ರಮ ಉದ್ಘಾಟನೆ, ಬರಡು ರಾಸು ತಪಾಸಣಾ ಶಿಬಿರ ಮತ್ತು ಹಾಲು ಉತ್ಪಾದಕರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘವು ಹಾಲು ಸಂಗ್ರಹ ಹಾಗೂ ಜಿಡ್ಡಿನಾಂಶ ಅಳೆಯಲು ಆಟೊಪ್ಯಾಟ್ ಯಂತ್ರ ಅಳವಡಿಸಿ ಪಾರದರ್ಶಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಾ ಸಂಘದ ಸುಸ್ಥಿರತೆ ಜತೆಗೆ ಹಾಲು ಉತ್ಪಾದಕರ ಹಿತಕ್ಕೂ ಬದ್ಧತೆ ತೋರುವ ಮೂಲಕ ಇತರ ಸಂಘಕ್ಕೆ ಮಾದರಿಯಾಗಿದೆ ಎಂದರು.

48 ವರ್ಷ ಮುಗಿಸಿ ಕಾರ್ಯನಿರ್ವಹಿಸುತ್ತಿರುವ ಸಂಘವು ಸುವರ್ಣ ವರ್ಷಾಚರಣೆ ಭವನ ನಿರ್ಮಾಣಕ್ಕೆ ವೈಯಕ್ತಿಕ ನೆರವಿನ ಜತೆಗೆ ಮನ್‌ಮುಲ್ ವತಿಯಿಂದ ಹಾಗೂ ಶಾಸಕರ ಅನುದಾನದಿಂದಲೂ ನೆರವು ಕೊಡಿಸುವ ಭರವಸೆ ನೀಡಿದರು.

ಮನ್‌ಮುಲ್ ನೀರ್ದೆಶಕ ಎಸ್.ಪಿ.ಸ್ವಾಮಿ ಮಾತನಾಡಿ, ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಮನ್‌ಮುಲ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳ ಜತೆ ಸ್ಪರ್ಧಾತ್ಮಕತೆ ನಡೆಸಿ ಯಶಸ್ಸು ಸಾಧಿಸಲು ನೆರವಾಗಿ ಎಂದರು.

ಆಟೊಪ್ಯಾಟ್ ಅಳವಡಿಕೆ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲಿದೆ. ಹಾಲಿನ ಗುಣಮಟ್ಟಕ್ಕೆ ತಕ್ಕ ಬೆಲೆ ಉತ್ಪಾದಕರಿಗೆ ಸಿಗಲಿದೆ. ಇದರ ಲಾಭಪಡೆಯಲು ಮುಂದಾಗಬೇಕು ಎಂದರು. ಮನ್‌ಮುಲ್‌ನಲ್ಲಿ ಸಂಘದ ಸದಸ್ಯ ಕುಟುಂಬದವರಿಗೆ ಶಿಕ್ಷಣ, ಆರೋಗ್ಯ ಸೇವೆ, ವಿಮೆಯಂತಹ ಹಲವು ಸೌಲಭ್ಯ ನೀಡುತ್ತಾ ಬಂದಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಮನ್‌ಮುಲ್ ವ್ಯವಸ್ಥಾಪಕ ನಿರ್ದೆಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ದೆಹಲಿಯಲ್ಲಿ ಮನ್‌ಮುಲ್‌ನ ಹಾಲು ಮಾರಾಟಕ್ಕೆ ಅವಕಾಶ ದೊರೆತಿದ್ದು, ದೆಹಲಿಯಲ್ಲಿನ ಸ್ಥಳೀಯ ಹಾಲಿಗಿಂತ ಮನ್‌ಮುಲ್ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದು, ನಮ್ಮ ಹಾಲಿನ ಬಗ್ಗೆ ಗ್ರಾಹಕರು ಮತ್ತು ಸ್ಥಳೀಯರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೆಹಲಿ ಮಾರುಕಟ್ಟೆ ನೀರಿಕ್ಷೆಯಂತೆ ವಿಸ್ತಾರ ಪಡೆದರೆ ಮನ್‌ಮುಲ್ ಗ್ರಾಹಕರಿಗೆ ಮತ್ತಷ್ಟು ಬೆಲೆ ನೀಡಬಹುದು. ಅದಕ್ಕಾಗಿ ಉತ್ಪಾದಕರ ಸಹಕಾರ ಬಹುಮುಖ್ಯ ಎಂದರು. ಇದೆ ವೇಳೆ ನೂತನ ಮನ್ ಮುಲ್ ನೀರ್ದೆಶಕರಾದ ಎಸ್.ಪಿ.ಸ್ವಾಮಿ, ಎಂ.ಕೆ.ಹರೀಶ್‌ಬಾಬು, ಮನ್‌ಮುಲ್ ಉಪ ವ್ಯವಸ್ಥಾಪಕ ನೀರ್ದೆಶಕ ಡಾ.ಮಂಜೇಶ್‌ಗೌಡ, ವಿಸ್ತರಣಾಧಿಕಾರಿ ರತ್ನಮ್ಮ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ರೂಪಾ ರಾಜಶೇಖರ್, ಉಪಾಧ್ಯಕ್ಷ ಎನ್.ಪಿ.ರಾಜಶೇಖರ್, ನಿರ್ದೇಶಕರಾದ ಎನ್.ಎಚ್.ಶಂಕರ್, ಎನ್.ಎಚ್.ಶೇಖರ, ಶಿವಲಿಂಗಯ್ಯ, ಕರಿಯಪ್ಪ, ನ.ಲಿ.ಕೃಷ್ಣ. ಮನ್‌ಮುಲ್‌ನ ಆಡಳಿತ ವಿಭಾಗದ ವ್ಯವಸ್ಥಾಪಕ ಡಾ.ಅಕ್ಕಲಪ್ಪಪ್ಪರೆಡ್ಡಿ, ಸಹಾಯಕ ವ್ಯವಸ್ಥಾಪಕ ಡಾ. ಗೋವರ್ಧನ್, ಹಿರಿಯ ಪಶು ಪರಿವೀಕ್ಷಕ ಯೊಗೇಶ, ಹಿರಿಯ ಆರೊಗ್ಯಾಧಿಕಾರಿ ಮೇಘಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net