ಸಹಕಾರಿ ಕ್ಷೇತ್ರದಲ್ಲಿ ಯೋಜನೆಗಳ ಅನುಷ್ಠಾನ

17CBP3a (1)
Published on

ಚಿಕ್ಕಬಳ್ಳಾಪುರ : ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ನಿಟ್ಟಿನಲ್ಲಿ ಪೂರಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಸಾರ್ವಜನಿಕರಿಗೆ ಆರ್ಥಿಕ ಬಲ ತುಂಬುವ ಕಾರ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದರ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.

ರಾಜ್ಯ ಸರ್ಕಾರವು ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದರ ಮೂಲಕ 39,300 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ. ಈಗಾಗಲೇ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗೀಯ ಹಂತದಲ್ಲಿ ಸಾಲ ವಿತರಣೆಯಾಗುತ್ತಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರೊನಾ ಸಂಕಷ್ಟದ ನಡುವೆ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ಘೋಷಣೆಯಾಗಿದ್ದ 13,500 ಕೋಟಿ ರೂ. ಸಾಲ ವಿತರಣೆಯು ದೊಡ್ಡ ಹೊರೆ ಎಂಬ ಭಾವನೆ ಮೂಡಿತ್ತು. ಇದರ ಆತಂಕದ ನಡುವೆಯೂ 24 ಲಕ್ಷ ರೈತರಿಗೆ 15,300 ಕೋಟಿ ರೂ. ವಿತರಣೆ ಗುರಿ ಹೊಂದಿದ್ದು ನ.16 ರವರೆಗೆ 15,22,076 ರೈತರಿಗೆ 9945 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಕರೊನಾ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂ. ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಕರೊನಾ ವಾರಿಯರ್ಸ್‌ಗಳಾದ 42,600 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಗಳಂತೆ 12.75 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿರುವುದು ಸಂತಸ ಮೂಡಿಸಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಸಹಕಾರವು ಆರ್ಥಿಕ ಸಮೃದ್ಧಿಯ ಸಂಕೇತ. ಒಂದು ಕುಟುಂಬ ಆರ್ಥಿಕವಾಗಿ ಬಲಗೊಂಡರೆ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗ ಅಭಿವೃದ್ಧಿ ಕಾಣುತ್ತದೆ ಎಂದು ತಿಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಭಾರಿ ಆರ್ಥಿಕ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದರೂ ಸರ್ಕಾರವು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ತೋರಿದೆ. ಸಮರ್ಥ ಸರ್ಕಾರ ಎಂಬುದಾಗಿ ಜನ ಮನ್ನಣೆ ಪಡೆದಿದೆ ಎಂದರು.

ಅಭಿವೃದ್ಧಿ ಹೊಂದಿದ ದೇಶ ಅಮೆರಿಕಕ್ಕಿಂತಲೂ ಮೂರು ಪಟ್ಟು ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕರೊನಾ ಸೋಂಕನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆ. ಈಗ ಸಕ್ರಿಯ ಪ್ರಕರಣಗಳು ಮತ್ತು ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೂ ಕರೊನಾ ಇನ್ನೂ ಹೋಗಿಲ್ಲ. ಇದಕ್ಕೆ ಈಗಲೂ ಎಚ್ಚರಿಕೆಯಿಂದ ಇರಬೇಕು ಎಂದರು.

ಶಾಸಕರಾದ ನಂಜೇಗೌಡ, ಸುಬ್ಬಾರೆಡ್ಡಿ, ರಾಜ್ಯ ಸಹಕಾರಿ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net