ಸಹಕಾರಿ ಕ್ಷೇತ್ರದತ್ತ ಯುವಜನ ಬರಲಿ ; ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಸಲಹೆ

13TMK_Madivaala_rajendra 1
Published on

ತುಮಕೂರು ; ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುವುದರ ಹಿಂದೆ ಹಿಂದುಳಿದ ಸಮುದಾಯಗಳ ಶ್ರಮ ಸಾಕಷ್ಟಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಹೇಳಿದರು.

ನಗರದ ಜಿಲ್ಲಾ ಮಡಿವಾಳ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಡಿವಾಳ ಸಮಾಜ ರಾಜಕೀಯವಾಗಿ ಶಕ್ತಿ ಪಡೆಯಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಹಕಾರಿ ಸಂಘದಿಂದ ಬಂದ ನನ್ನಂತಹ ಅನೇಕರಿಗೆ ಹಲವಾರು ಸಮುದಾಯಗಳು ಸಹಕಾರ ನೀಡಿದ ಪರಿಣಾಮ ಇಂದು ವಿಧಾನಪರಿಷತ್ ಸದಸ್ಯನಾಗಿದ್ದೇನೆ, ಒಗ್ಗೂಡಿ ಕೆಲಸ ಮಾಡಿದರೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದರು. ಕ್ರಿಬ್ಕೋ, ಸಹಕಾರ ಮಹಾಮಂಡಳ ಸೇರಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷಾತೀತವಾಗಿರುವ ಸಹಕಾರಿ ಕ್ಷೇತ್ರದತ್ತ ಮತ್ತಷ್ಟು ಯುವಜನರು ಬರಬೇಕಿದೆ ಎಂದರು.

ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು ವಿಧಾನಸಭೆ, ವಿಧಾನಪರಿಷತ್‌ಗೆ ಆಯ್ಕೆಯಾಗಬೇಕಾದರೆ ಒಗ್ಗಟ್ಟು ಮುಖ್ಯ, ಈ ನಿಟ್ಟಿನಲ್ಲಿ ಮೇ 22ರಂದು ಮಡಿವಾಳ ಸಮುದಾಯ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬೃಹತ್ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.

ತರಿಕೆರೆ ಗೋಪಾಲಕೃಷ್ಣ ಮಾತನಾಡಿ, ಸಮಾಜವನ್ನು ಒಗ್ಗೂಡಿಸುವುದು ಬಹುದೊಡ್ಡ ಕೊರತೆ, ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ನಾವು ಒಗ್ಗೂಡದಿದ್ದರೆ ಪರಿಶಿಷ್ಟ ಜಾತಿ ಎಂಬುದು ಕನಸಿನ ಕೂಸಾಗಲಿದೆ. ಇದರ ಜತೆಗೆ ರಾಜಕೀಯ ಅಧಿಕಾರ ಪಡೆಯಲು ಸಹ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದರು.

ಮಡಿವಾಳ ಸಮುದಾಯದ ಮುಖಂಡ ಮಳವಳ್ಳಿ ಶಿವಣ್ಣ, ಅಮರನಾಥ್, ನಂಜಪ್ಪ, ಚಿಕ್ಕಬಳ್ಳಾಪುರ ನಾಗರಾಜು, ಗೋಪಾಲಕೃಷ್ಣ, ರಂಗಸ್ವಾಮಿ, ಪ್ರಕಾಶ್, ಪಾಪಣ್ಣ, ತುಮಕೂರು ಜಿಲ್ಲಾಧ್ಯಕ್ಷ ಲಕ್ಷ್ಮಣ್, ಕುಲಕಸುಬುದಾರರ ಸಂಘದ ಅಧ್ಯಕ್ಷ ಶಾಂತಕುಮಾರ್, ಗೌರವಾಧ್ಯಕ್ಷ ಕೆಂಪನರಸಯ್ಯ, ಕಾರ್ಯಾಧ್ಯಕ್ಷ ಎಚ್.ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ ಇದ್ದರು.

ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಹಾಗೂ ಜಿಲ್ಲೆಯ ವಿವಿಧ ಗ್ರಾಪಂ ಆಯ್ಕೆಯಾಗಿರುವ 71 ಜನ ಸದಸ್ಯರನ್ನು ಸನ್ಮಾನಿಸಲಾಯಿತು.

22ರಂದು ಬೃಹತ್ ಸಮಾವೇಶ ; ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು, ಇಡೀ ರಾಜ್ಯದ ಜನರ ಒತ್ತಾಯವಾಗಿದೆ. ಮೇ 22ರಂದು ಜಿಲ್ಲೆಯಲ್ಲಿ 50 ಸಾವಿರ ಜನರನ್ನು ಸೇರಿಸಿ, ಬೃಹತ್ ಸಮಾವೇಶ ನಡೆಸಲು ಸಿದ್ಧರಿದ್ದೇವೆ. ನಾವು ಒಗ್ಗಟ್ಟಾಗಿದ್ದರೆ, ಸರ್ಕಾರದ ಸವಲತ್ತು ಪಡೆಯಬಹುದು, ಸಣ್ಣ ಪುಟ್ಟ ಜಾತಿಗಳನ್ನು ಕೈಹಿಡಿದಿರುವ ಸಿದ್ದರಾಮಯ್ಯ ಅವರನ್ನು ಅಭಿನಂದಿಸಬೇಕಿದೆ ಎಂದು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಮರನಾಥ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net