ಸಹಕಾರಿ ಕ್ಷೇತ್ರದ ಆರ್ಥಿಕ ವ್ಯವಸ್ಥೆ ಬಲಪಡಿಸಿ

16 mbl ph 6
?????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮುಳಬಾಗಿಲು: ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಮೂಲಕ ಕೃಷಿ ಸೇರಿ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ತಾಲೂಕಿನ ತಾಯಲೂರು ವ್ಯವಸಾಯ ಸೇವಾ ಸಹಕಾರ ಸಂಘದ ಗಣಕೀಕರಣ ಮತ್ತು ಮೈಕ್ರೋ ಎಟಿಎಂ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ವಿಎಸ್‌ಎಸ್‌ಎನ್‌ಗಳಿಗೆ ಪುನಶ್ಚೇತನ ನೀಡಿ ಗ್ರಾಮೀಣ ಭಾಗದಲ್ಲಿ ಆರ್ಥಿಕ ಸ್ವಾವಲಂಬನೆಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಸಾಮಾನ್ಯ ವ್ಯಕ್ತಿಗೂ ಸಾಲ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ, ರೈತರಿಗೆ 3 ಲಕ್ಷ ರೂ. ವರೆಗೆ ಕೃಷಿ ಸಾಲ, ಮಹಿಳಾ ಸ್ವ-ಸಹಾಯ ಸಂಘಕ್ಕೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ ವಿತರಿಸಲಾಗುತ್ತಿದೆ. ಕಂತು ಪ್ರಕಾರ ಮರು ಪಾವತಿ ಮಾಡಿದವರ ಬಡ್ಡಿಯನ್ನು ಸರ್ಕಾರ ಬ್ಯಾಂಕಿಗೆ ತುಂಬಿಕೊಡುತ್ತದೆ ಎಂದರು.

ಮನೆ ಬಾಗಿಲಿಗೆ ಸಾಲ: ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ, ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಎಂಬುದನ್ನು ಕೈಬಿಡಬೇಕು. ಸಹಕಾರಿ ಕ್ಷೇತ್ರದ ಆರ್ಥಿಕ ವ್ಯವಸ್ಥೆ ಬಲಪಡಿಸಿದರೆ ಯಾವಾಗ ಬೇಕಾದರೂ ಮನೆ ಬಾಗಿಲಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಡೇರಿ, ವಿವಿಧ ಸಹಕಾರಿ ಕ್ಷೇತ್ರಗಳು, ಸಂಘ ಸಂಸ್ಥೆಗಳು, ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಠೇವಣಿ ಇಟ್ಟು ವ್ಯವಹರಿಸಿದರೆ ಮತ್ತಷ್ಟು ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ನಷ್ಟದ ಹಾದಿಯಲ್ಲಿದ್ದಾಗ ಗೋವಿಂದಗೌಡ ನೇತೃತ್ವದಲ್ಲಿ ಬಂದ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಇಂದು ಬ್ಯಾಂಕ್ ಎರಡು ಜಿಲ್ಲೆಗಳ ಕಲ್ಪವೃಕ್ಷವಾಗಿದೆ, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದು ಎಂದರು.

ಕೋಲಾರ ಟಿಸಿಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀನಿವಾಸಪುರ ವೆಂಕಟರೆಡ್ಡಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ತಾಯಲೂರು ಟಿ.ಎಸ್.ರಮೇಶ್, ತಾಯಲೂರು ಗ್ರಾಪಂ ಮಾಜಿ ಅಧ್ಯಕ್ಷ ಆರ್.ರಂಗಸ್ವಾಮಿ, ಎ.ಟಿ.ಮುನಿಸ್ವಾಮಿಗೌಡ, ಡೇರಿ ಅಧ್ಯಕ್ಷ ಡಿ.ಆರ್.ರಾಮಕೃಷ್ಣಪ್ಪ, ಮಾಜಿ ಅಧ್ಯಕ್ಷ ಎ.ಆರ್.ರಾಮಮೂರ್ತಿ, ತಾಯಲೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಶ್ರೀನಿವಾಸ್ , ಕಾರ್ಯದರ್ಶಿ ಸರ್ದಾರ್ ಮತ್ತಿತರರು ಇದ್ದರು.

ಸೇವಾ ಶುಲ್ಕ ವಿಧಿಸಿಲ್ಲ: ಮೈಕ್ರೋ ಎಟಿಎಂ ವ್ಯವಸ್ಥೆಯನ್ನು ವಿಎಸ್‌ಎಸ್‌ಎನ್‌ಗಳ ಮೂಲಕ ಅನುಷ್ಠಾನಗೊಳಿಸಿ ಮನೆ ಬಾಗಿಲಿಗೆ ಎಟಿಎಂ ಗಳೊಂದಿಗೆ ಸಿಬ್ಬಂದಿ ತೆರಳಿ ಹಣ ವಿಥ್ ಡ್ರಾ ಮತ್ತು ಠೇವಣಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಯಾವುದೇ ಸೇವಾ ಶುಲ್ಕ ವಿಧಿಸಿಲ್ಲ, 3 ತಿಂಗಳ ನಂತರ ಬೇರೆ ಬ್ಯಾಂಕುಗಳ ವ್ಯವಹಾರವನ್ನು ಈ ಎಟಿಎಂಗಳ ಮೂಲಕ ಮಾಡುವ ವ್ಯವಸ್ಥೆಯನ್ನೂ ಡಿಸಿಸಿ ಬ್ಯಾಂಕ್‌ನಿಂದ ಕಲ್ಪಿಸಲಾಗುತ್ತಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net