ಸಹಕಾರ ಸಚಿವಾಲಯದ ಉದ್ದೇಶ ಈಡೇರಿಲ್ಲ

shivanand patil
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೆಲ ವರ್ಷಗಳ ಇತ್ತೀಚೆಗೆ ರಚಿಸಿದ ಸಹಕಾರ ಸಚಿವಾಲಯದ ಉದ್ದೇಶ ಈಡೇರಿಲ್ಲ. ಅದು ಮಹಾರಾಷ್ಟ್ರದಲ್ಲಿನ ಸಹಕಾರ ಸಂಘಗಳ ಮೇಲೆ ಹಿಡಿತ ಸಾಧಿಲು ಸಹಕಾರ ಸಚಿವಾಲಯ ರಚಿಸಿತ್ತು ಎಂದು ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ರಂಗದ ಸ್ಪಿನ್ನಿಂಗ್ ಮಿಲ್ ಹಾಗೂ ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಿಲ್ಲ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 60 ಸಾವಿರ ರೂ. ಮೊತ್ತದ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿದರೆ ಸಹಕಾರ ಸಚಿವಾಲಯದ ಉದ್ದೇಶ ಸಫಲವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಹಕಾರ ಸಂಸ್ಥೆಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತ ಮಾಡಿದೆ. 2023-24ನೇ ಸಾಲಿಗೆ 5600 ಕೋಟಿ ರೂ. ನೀಡಿದ್ದ ನಬಾರ್ಡ್ 2024-25ನೇ ಸಾಲಿಗೆ 2340 ಕೋಟಿ ರೂ. ಮಾತ್ರ ನೀಡಿದೆ. ಇದರಿಂದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ರಾಜ್ಯದ 30-35 ಲಕ್ಷ ರೈತರು ಡಿಸಿಸಿ ಬ್ಯಾಂಕ್​ಗಳಿಂದ ಕೃಷಿ ಸಾಲ ಪಡೆಯುತ್ತಾರೆ ಎಂದು ಹೇಳಿದರು.

ಕೆಎಚ್​ಡಿಸಿ-ಕೆಎಸ್​ಐಡಿಸಿ ವಿಲೀನ

ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸುವ ಸಮವಸ್ತ್ರ ಬಟ್ಟೆ ತಯಾರಿಸಲು ನೇಕಾರರಿಗೆ ಕೆಲಸ ಕೊಡದಿದ್ದರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್​ಡಿಸಿ) ನಷ್ಟದಲ್ಲಿದೆ. ಇದಕ್ಕೆ ಎಲ್ಲ ಸರ್ಕಾರಗಳು ಹೊಣೆ. ನಷ್ಟದಲ್ಲಿರುವ ಕೆಎಚ್​ಡಿಸಿ ಹಾಗೂ ಕೆಎಸ್​ಐಡಿಸಿಯನ್ನು ವಿಲೀನಗೊಳಿಸುವ ಉದ್ದೇಶ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ರಾಜೀನಾಮೆ ನೀಡುತ್ತೇನೆ

ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ನಾನು ಪ್ರಭಾವ ಬೀರುವ ಕೆಲಸ ಮಾಡಿದ್ದು ನಿಜವಾಗಿದ್ದರೆ ಇವತ್ತೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ತಮ್ಮ ಮಗನನ್ನು ಗೆಲ್ಲಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ರೀತಿ ಆಪಾದನೆ ಮಾಡಿರುವುದು ದುರದಷ್ಟಕರ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ರೌಡಿ ಶೀಟರ್ ಅಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಯವರೇ ಲಿಖಿತವಾಗಿ ಸ್ಪಷ್ಟಪಡಿಸಿದ್ದಾರೆ. ಅವರ ಮೇಲೆ ನಾನೇನೂ ಒತ್ತಡ ಹಾಕಿಲ್ಲ. ಮುಸ್ಲಿಮ್ು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಬೊಮ್ಮಾಯಿ ಅವರಿಗೆ ಇಷ್ಟವಾಗುವುದಿಲ್ಲ. ಹಿಂದೆ ಅಜ್ಜಂಪೀರ ಖಾದ್ರಿ ಸ್ಪರ್ಧಿಸಿದ್ದಾಗ ಭಯೋತ್ಪಾದಕ ಎಂದು ಟೀಕಿಸಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net