

ಪಾಂಡವಪುರ: ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದರೆ ಮಾತ್ರ ರೈತರು ಮತ್ತು ಸಾರ್ವಜನಿಕರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ಹೀಗಾಗಿ, ಸಹಕಾರ ಸಂಘಗಳ ಅಭಿವೃದ್ಧಿ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಚಿಕ್ಕಾಡೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಗೋದಾಮು ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಸರ್ಕಾರ ಸಂಘಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಅನುದಾನ ನೀಡಬೇಕು ಇದರಿಂದ ಸಂಘಗಳು ಬೆಳವಣಿಗೆ ಕಾಣಲಿವೆ ಎಂದರು.
ಚಿಕ್ಕಾಡೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವ ಜತೆಗೆ ಲಾಭದಾಯಕವಾಗಿದೆ, ಇದೀಗ ಗೋದಾಮು ನಿರ್ಮಾಣ ಮಾಡುತ್ತಿರುವುದು ಖುಷಿಯ ವಿಚಾರ, ಗ್ರಾಮಸ್ಥರ ಮನವಿಯಂತೆ ಗೋದಾಮು ನಿರ್ಮಾಣಕ್ಕೆ 5 ಲಕ್ಷ ಅನುದಾನ ನೀಡಲಾಗಿದೆ. ಇದರ ಜತೆಗೆ ಹೆಚ್ಚುವರಿ ಅನುದಾನ ನೀಡಲಾಗುವುದು. ಅಲ್ಲದೇ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ 60 ಲಕ್ಷ ಅನುದಾನ ನೀಡಲಾಗಿದೆ, ದೇವೇಗೌಡನಕೊಪ್ಪಲು ಗ್ರಾಮದ ರಸ್ತೆಯ ಅಭಿವೃದ್ಧಿಗೆ 2 ಲಕ್ಷ ರೂ.ನೀಡಲಾಗಿದೆ. ಜತೆಗೆ ಚಿಕ್ಕಾಡೆಯಿಂದ ಹರಳಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಬಸವೇಗೌಡ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದೇ ರೀತಿ ಗ್ರಾಮದ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ಶ್ರಮಿಸಬೇಕು, ತಾಲೂಕಿನ ಬಹುತೇಕ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ. ರೈತರ ಹಣ ಲಪಟಾಯಿಸುವ ವ್ಯಕ್ತಿಗಳಿಗೆ ಒಳ್ಳೆಯದಾಗುವುದಿಲ್ಲ ಎಂದರು.
ಕೃಷಿಪತ್ತಿನ ಸಹಕಾರ ಸಂಘದ ರವೀಂದ್ರಸ್ವಾಮಿ, ಉಪಾಧ್ಯಕ್ಷ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಅಕ್ಷತಾ, ಸದಸ್ಯ ಅವಿನಾಶ್, ಮುಖಂಡರಾದ ಸಿ.ಎಂ.ವಿಜೇಂದ್ರ, ಸಿ.ಎಂ.ಮಹೇಶ್, ಡಿ.ಕೆ.ದೇವೇಗೌಡ, ಸಿ.ವಿ.ಗಿರೀಗೌಡ, ಕೃಷ್ಣೇಗೌಡ, ಸಿ.ಬಿ.ರಮೇಶ್, ಕಾರ್ಯದರ್ಶಿ ರಜಿನಿ ಇತರರಿದ್ದರು.