ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯದಿರಲಿ

1751697344781
Published on

ಸಕಲೇಶಪುರ: ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯುವುದು ಉತ್ತಮ ಲಕ್ಷಣವಲ್ಲ ಎಂದು ಕಾಫಿ ಮಂಡಳಿ ಅಧ್ಯಕ್ಷ.ಎಂ.ಕೆ.ದಿನೇಶ್ ಹೇಳಿದರು.

ಶನಿವಾರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ಹಾನುಬಾಳ್ ಕಾಫಿ ಬೆಳೆಗಾರರ ಸಹಕಾರ ಸಂಘ ದೇವಾಲದಕೆರೆ ಶಾಖೆಯ ನೂತನ ಮಾರಾಟ ಮಳಿಗೆ ಉದ್ಘಾಟನೆ ನಂತರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಮಲೆನಾಡಿನಲ್ಲಿ ಸಹಕಾರ ಸಂಘಗಳ ಸಂಖ್ಯೆ ತೀರ ಅಲ್ಪ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಾಕಷ್ಟು ಸಹಕಾರ ಸಂಘಗಳು ರಾಜಕೀಯದಿಂದಾಗಿ ನಾಶವಾಗಿವೆ. ಆದ್ದರಿಂದ ಸಹಕಾರ ಸಂಘದಲ್ಲಿ ರಾಜಕೀಯ ಬೆರಸಬಾರದು ಎಂದರು.

ಬೆಳೆಗಾರರಲ್ಲಿ ವೃತ್ತಿಪರತೆಯ ಕೊರತೆ ಕಾಡುತ್ತಿದೆ. ಯಾವುದೇ ಬೆಳೆಗೂ ಮಣ್ಣು, ನೀರು, ಗೊಬ್ಬರದ ಅಗತ್ಯವಿದೆ. ಇವುಗಳ ಬಳಕೆಯ ಬಗ್ಗೆ ಸಾಕಷ್ಟು ಬೆಳೆಗಾರರಿಗೆ ಅರಿವಿನ ಕೊರತೆ ಇದೆ. ಅಲ್ಲದೆ ಮಾರುಕಟ್ಟೆ ಜ್ಞಾನ ಸಹ ಅಗತ್ಯವಿದೆ. ತಮ್ಮ ಬೆಳೆಯನ್ನು ಯಾವಾಗ ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ಪರಿಕಲ್ಪನೆ ಹೊಂದುವುದು ಅಗತ್ಯ. ಗೊಬ್ಬರ ಬಳಕೆಯನ್ನು ಸಹ ಹೆಚ್ಚಿನ ಜಾಗ್ರತೆಯಿಂದ ಬಳಸುವ ಅಗತ್ಯವಿದೆ. ಸಮಯವಲ್ಲದ ಸಮಯದಲ್ಲಿ ಉಚಿತವಲ್ಲದ ಗೊಬ್ಬರ ನೀಡಿದರೆ ಹಣ ವ್ಯರ್ಥವಾಗಲಿದೆ. ಆದ್ದರಿಂದ ಇಂತಹ ವಿಚಾರಣ ಸಂಕಿರಣಗಳಲ್ಲಿ ಬೆಳೆಗಾರರು ಭಾಗವಹಿಸುವುದು ಅಗತ್ಯ. ಸಾಕಷ್ಟು ಹೋರಾಟದ ಮೂಲಕ ಬೆಳೆಗಾರ ಸಾಲ ತೀರುವಳಿಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಈ ಯೋಜನೆಯ ಲಾಭ ಪಡೆಯಲು ಸಾಕಷ್ಟು ಬೆಳೆಗಾರರು ವಿಫಲರಾಗಿದ್ದು, ರಾಜ್ಯದಲ್ಲಿ ಸುಮಾರು ಆರು ಸಾವಿರ ಬೆಳೆಗಾರರು ಸುಸ್ತಿದಾರರಾಗಿದ್ದಾರೆ ಎಂದರು.

ಕಾಫಿ ಬೆಳೆಗಾರರು ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ. ಕಾಫಿ ಬೆಳೆಗಿಂತ ಮತ್ತೊಂದು ಉತ್ತಮ ಬೆಳೆಯಿಲ್ಲ, ಎಲ್ಲ ರಂಗದಲ್ಲೂ ಕಷ್ಟಗಳಿರುತ್ತವೆ. ಕಷ್ಟಗಳನ್ನು ಮೆಟ್ಟಿ ನಿಂತಾಗ ಉತ್ತಮ ಬೆಳೆಗಾರರಾಗಬಹುದು ಎಂದರು.

ಕಾಫಿ ಮಂಡಳಿಯಿಂದ ಕಾಫಿ ತೋಟಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಪರೀಕ್ಷೆಗಳು ನಡೆಯುತ್ತಿವೆ. ಇದರಿಂದ ಕಾರ್ಮಿಕ ಕೊರತೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಕಾಫಿಗೆ ಉತ್ತಮ ಭವಿಷ್ಯವಿದ್ದು ನೆರಳಿನಾಶ್ರಯದಲ್ಲಿ ಬೆಳೆಯುವ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಬೆಳೆಗಾರರು ಮರಗಳನ್ನು ಉಳಿಸಿಕೊಂಡು ಕಾಫಿ ಬೆಳೆಯುವುದು ಒಳ್ಳೆಯದು ಎಂದರು.

ಬೆಳೆಗಾರರು ಎಫ್‌ಬಿಒ ಮಾಡಿಕೊಳ್ಳುವುದರಿಂದ ತಮ್ಮ ಕಾಫಿಗೆ ಉತ್ತಮ ಧಾರಣೆ ಪಡೆಯಬಹುದಾಗಿದೆ. ಕಾಫಿ ಮಂಡಳಿ ಇಂತಹ ನೂರು ಎಫ್‌ಬಿಒ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ವೃತ್ತಿಗೌರವ ನಿಮ್ಮನ್ನು ಕೈ ಹಿಡಿಯಲಿದೆ. ತಾವು ಮಾಡುವ ಕೆಲಸದ ಬಗ್ಗೆ ನಿರಾಶಕ್ತಿ ತಾಳುವುದು ಒಳ್ಳೆಯದಲ್ಲ ಎಂದರು.

ಕಾಫಿ ಮಂಡಳಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಕಾಫಿ ಬೆಲೆ ವೇಗವಾಗಿ ಇಳಿಯುತ್ತಿದ್ದರೆ, ಏರಿಕೆ ನಿಧಾನಗತಿ ಸಾಗುತ್ತಿದೆ. ಬೆಳೆಗಾರರಿಗೆ ಹಣಕಾಸಿನ ನಿರ್ವಹಣೆ ಕಲಿಯುವ ಅಗತ್ಯವಿದೆ. ಇದರಿಂದ ಬೆಳೆಗಾರರು ಸಾಲದ ಸುಳಿಯಿಂದ ಹೊರಬರುವ ತಂತ್ರ ತಿಳಿಯಲಿದೆ. ಬೆಳೆಗಾರರ ಸಮಸ್ಯೆಗಳಿಗೆ ಒಗ್ಗೂಡಿ ಹೋರಾಟ ಮಾಡುವ ಅಗತ್ಯವಿದೆ. ಕೃಷಿಗೆ ಮಾಡುವ ಕೆಲಸವನ್ನು ತೋಟಗಳಿಗೂ ಮಾಡಲಾಗುತ್ತಿದೆ. ಆದರೆ, ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಬೆಳೆಗಾರರನ್ನು ಹೀನಾಯವಾಗಿ ಕಾಣಲಾಗುತ್ತಿದೆ. ವಾಸ್ತವವಾಗಿ ಕಾಫಿ ಬೆಳೆಗಾರರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದರು.

ಸಹಕಾರ ಸಂಘದ ಅಧ್ಯಕ್ಷ ಹಾನಬಾಳ್ ಭಾಸ್ಕರ್ ಮಾತನಾಡಿ, ಗೊಬ್ಬರ ಕಲಬೆರಕೆ ತಡೆಗಟ್ಟುವ ನಿಟ್ಟಿನಲ್ಲಿ ಹುಟ್ಟು ಹಾಕಲಾದ ಸಹಕಾರ ಸಂಘ ಕಳೆದ ಏಳು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದು ಲಾಭದ ದಾರಿಯಲ್ಲಿ ಸಾಗುತ್ತಿದೆ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಬೆಳೆಗಾರರು ಸಹಕಾರ ಸಂಘದಲ್ಲಿ ವ್ಯವಹಾರ ನಡೆಸಿದರೆ ಸಂಘ ಅಭಿವೃದ್ಧಿ ಹೊಂದಲಿದೆ ಎಂದರು. ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳಿಗೆ ಉತ್ತಮ ಅವಕಾಶವಿದ್ದು ಬೆಳೆಗಾರರು ಒಂದಾಗಿ ಕೆಲಸ ಮಾಡಿದರೆ ಸಹಕಾರ ಸಂಘದಲ್ಲಿ ಅದ್ಭುತವಾದುದ್ದನ್ನು ಸಾಧಿಸಬಹುದಾಗಿದೆ ಎಂದರು.

ಮುಖಂಡರಾದ ಗುಂಡೇಗೌಡ, ನರೇಶ್, ರವಿ, ಚಂದ್ರಶೇಖರ ರತ್ನಕಾರ್, ರಾಜೀವ್, ಪ್ರತಿಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net