

ಚನ್ನರಾಯಪಟ್ಟಣ: ಸಹಕಾರ ಸಂಘಗಳು ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಜಿನ್ನೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 7.7 ಲಕ್ಷ ರೂ. ವೆಚ್ಚದ ನೂತನ ಕಚೇರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರೈತರು ಪಹಣಿ ಪಡೆಯಲು ತಾಲೂಕು ಇಲ್ಲವೇ ಹೋಬಳಿ ಕೇಂದ್ರಗಳಿಗೆ ತೆರಳಬೇಕಿತ್ತು. ಆದರೆ ಸದ್ಯ ಸಹಕಾರ ಸಂಘಗಳಲ್ಲಿಯೇ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಈ ಸಂಘದ ಮೂಲಕ ರೈತರಿಗೆ ಪಹಣಿ ನೀಡುವ ಸೌಲಭ್ಯವನ್ನು ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸಬೇಕು ಎಂದು ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ಸೂಚಿಸಿದರು.
ಜಿನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 7.30 ಲಕ್ಷ ರೂ. ಮೌಲ್ಯದ ಶಿಥಿಲೀಕರಣ(ಕೋಲ್ಸ್) ಯಂತ್ರಗಳನ್ನು ಒದಗಿಸಲಾಗುವುದು. ಗ್ರಾಮದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಶಾಲೆಗಳ ಕೊಠಡಿ ಮತ್ತು ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಸಂಘದ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷ ಮಂಜುಳಾ, ಮುಖಂಡರಾದ ಪಾಪಣ್ಣ, ಶಶಿಧರ್, ಮೇಟಿಕೆರೆ ಚಂದ್ರು, ಮಂಜುನಾಥ್, ಅಂಜನ್, ಎಸ್.ಆರ್.ಮಧು, ಸಿಇಒಗಳಾದ ಅಶೋಕ್, ಹರೀಶ್ ಹಾಗೂ ಇತರರು ಇದ್ದರು.