

ಮದ್ದೂರು: ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವುದು ಸಂತಸಕರ ಸಂಗತಿ ಎಂದು ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮನ್ಮುಲ್ ನಾಮನಿರ್ದೇಶಿತ ನಿರ್ದೇಶಕ ಕದಲೂರು ರಾಮಕೃಷ್ಣ ಹರ್ಷ ವ್ಯಕ್ತಪಡಿಸಿದರು.
ಶಿವಪುರದಲ್ಲಿ ಹೆಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಶ್ರೀನಿವಾಸ್, ಎಚ್.ಕೆ.ಕೃಷ್ಣ , ಎಚ್.ಎಸ್.ಕೃಷ್ಣ, ಎಚ್.ಪಿ.ಕೃಷ್ಣೇಗೌಡ, ತಗಡೇಗೌಡ , ಮೀನಾಕ್ಷಿ, ಶಶಿ, ನಾಗರಾಜು, ಶೇಕರೇಗೌಡ ಹಾಗೂ ಸುಧಾ ಅವರನ್ನು ಶುಕ್ರವಾರ ಅಭಿನಂದಿಸಿ ಮಾತನಾಡಿದರು.
ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಯ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗಳಿಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನೆ ಮಾಡುವ ಮೂಲಕ ಮತ್ತಷ್ಟು ಶಕ್ತಿ ತುಂಬಲು ಮುಂದಾಗಬೇಕೆಂದು ಮನವಿ ಮಾಡಿದರು.
ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯ ಹೆಮ್ಮನಹಳ್ಳಿ, ತಗ್ಗಳ್ಳಿ, ಬಿದರಹೊಸಹಳ್ಳಿ, ಅಣ್ಣೂರು, ಗೂಳೂರು, ಕೊಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳ ಗದ್ದುಗೆಯನ್ನು ಕಾಂಗ್ರೆಸ್ ಹಿಡಿದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ಸಂಘಗಳಲ್ಲಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರ್ಕಾರವಾಗುವ ಮೂಲಕ ಜನಮನ್ನಣೆ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖಂಡರಾದ ಜೈ ಶಂಕರ್, ಎಚ್.ಕೆ. ಅಶ್ವತ್ಥ್, ಎ.ಕೃಷ್ಣ, ಅಪ್ಪಾಜಿ, ಅಭಿಷೇಕ್, ಕೆ.ಆರ್.ಮಹೇಶ್ ಇತರರು
ಇದ್ದರು.