

ಚಿತ್ರದುರ್ಗ: ಸಹಕಾರ ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ ಅಧಿಕವಾಗಿರುತ್ತದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಕೋಗುಂಡೆ ಹೇಳಿದರು.
ರಾಜ್ಯಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಹಕಾರ ಭವನದಲ್ಲಿ ಚಿತ್ರದುರ್ಗ, ಹೊಳಲ್ಕೆರೆ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಶನಿವಾರ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ತರಬೇತಿಗಳು ಸಂಘದ ಅಭಿವೃದ್ಧಿಗೆ ಪೂರಕವಾಗಿವೆ. ಜವಾಬ್ದಾರಿ, ಸಮಯ ಪ್ರಜ್ಞೆ ರೂಢಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಯೂನಿಯನ್ ನಿರ್ದೇಶಕ ಜಿ.ಬಿ. ಶೇಖರಪ್ಪ ಮಾತನಾಡಿ, ಉತ್ತಮ ಗುಣಮಟ್ಟದ ಹಾಲಿನ ಸಂಗ್ರಹಣೆ ಅಗತ್ಯತೆ ಇದೆ ಎಂದರು.
ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್. ದಿಲೀಪ್‌ಕುಮಾರ್ ಮಾತನಾಡಿ, 1.20 ಲಕ್ಷ ಸಹಕಾರಿಗಳನ್ನು ಯಶಸ್ವಿನಿ ಯೋ ಜನೆಯಡಿ ತರುವ ಗುರಿ ಇದೆ ಎಂದರು.
ನಿರ್ದೇಶಕ ಜಿ.ಎನ್. ಹರೀಶ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಪಿ. ಅಂಜನಮೂರ್ತಿ, ಶಿಮುಲ್ ಉಪ ವ್ಯವಸ್ಥಾಪಕ ಕೆ.ಪಿ. ಸಂಜಯ್, ಹಾಲು ವಿಸ್ತರಣಾಧಿಕಾರಿಗಳಾದ ವಿನುತ್‌ಕುಮಾರ್, ರಂಜಿತಾ ಇದ್ದರು.
ಸೌಮ್ಯ ಸ್ವಾಗತಿಸಿ, ನಾಗರಾಜ ಪಾಟೀಲ್ ವಂದಿಸಿದರು. ಜಯಶ್ರೀ ಪಿ. ಹುನಗುಂದ ನಿರೂಪಿಸಿದರು.