

ದಾಬಸ್‌ಪೇಟೆ: ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ರಚನೆ ಮಾಡಲು ಇತ್ತೀಚೆಗೆ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ನಿರ್ಣಯ ತೆಗೆದುಕೊಂಡರು. ನರಸೀಪುರ ಪಂಚಾಯಿತಿ ಭಾಗದ ಹಳ್ಳಿಗಳು ಸೋಂಪುರ, ನಿಡವಂದ ಹಾಗೂ ಮರಳಕುಂಟೆ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಹಂಚಿಕೆಯಾಗಿದ್ದು, ಅಲ್ಲಿಂದ ಷೇರು ಬಿಡುಗಡೆ ಮಾಡಿಸಿಕೊಂಡು ಬಂದು ನರಸೀಪುರದಲ್ಲಿ ಸಂಘ ರಚಿಸಿ ಅಲ್ಲಿ ಮುಂದುವರಿಯಲು ರೈತರು ಒಪ್ಪಿದರು. ಗ್ರಾಪಂ ಅಧ್ಯಕ್ಷ ರಾಮಾಂಜಿನಯ್ಯ ಮಾತನಾಡಿ, ಸಂಘದ ಕಟ್ಟಡ ನಿರ್ಮಾಣಕ್ಕೆ 6 ಗುಂಟೆ ಜಾಗ ಗುರುತಿಸಿ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಸಂಘದ ನಿರ್ಮಾಣಕ್ಕೆ ಅಗತ್ಯ ಸಹಾಯವನ್ನು ಪಂಚಾಯಿತಿಯಿಂದ ನೀಡಲಾಗುವುದು ಎಂದರು. ಗ್ರಾಪಂ ಸದಸ್ಯ ನಾಗರಾಜು ಮಾತನಾಡಿ, ದಶಕಗಳ ಹಿಂದೆಯೇ ಸಂಘ ರಚನೆ ಆಗಬೇಕಿತ್ತು. ರಾಜಕೀಯ ಸ್ವಹಿತಾಶಕ್ತಿಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಸಂಘ ರಚನೆಗೆ ಮುಂದಾಗಿದ್ದು, ರೈತರು ಬೆಂಬಲಿಸೋಣ ಎಂದರು. ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮೂರು ಸಂಘಗಳು ದೂರ ಆಗುತ್ತಿದ್ದು, ಅಲ್ಲಿಗೆ ಹೋಗಿ ಬರುವುದಕ್ಕೆ ಒಂದು ದಿನ ಬೇಕಾಗುತ್ತದೆ. ಸ್ಥಳೀಯವಾಗಿಯೇ ಸಂಘ ಇದ್ದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದರು.