ಸಹಕಾರ ನೌಕರರಿಂದ 26ರಂದು ಪ್ರತಿಭಟನೆ, ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

sahakar
Published on

ಹುಬ್ಬಳ್ಳಿ: ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಬ್ಯಾಂಕ್​ಗಳ ನೌಕರರಿಗೆ ನ್ಯಾಯಯುತವಾದ ಸವಲತ್ತುಗಳು ಸಿಗದೇ ವಂಚನೆಯಾಗುತ್ತಿದ್ದು, ಇದನ್ನು ವಿರೋಧಿಸಿ ಬೆಳಗಾವಿಯ ಸುವರ್ಣ ಸೌಧದ ಎದುರು ಡಿ. 26ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ- ಬ್ಯಾಂಕ್​ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಡಿ.ಎಸ್. ಬಡಗಿಗೌಡ್ಡು ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ಎಲ್ಲ ವರ್ಗದ ನೌಕರರು ಸೇರಿ ಸುಮಾರು 10 ಸಾವಿರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದರು.

ಸರ್ಕಾರದ ತಪು್ಪ ನೀತಿಯಿಂದಾಗಿ ಸಂಘಗಳ ಸೇವೆಗೆ ನೀಡುತ್ತಿರುವ ಪ್ರೋತ್ಸಾಹ ಧನ ಮಾರ್ಜಿನ್ ಹಣದಲ್ಲಿ ಕಡಿತವಾಗಿ ನಷ್ಟವುಂಟಾಗುತ್ತಿದೆ. ರೈತರ ಸಾಲ ಮನ್ನಾ ಹಣ ಇನ್ನೂ ಕೆಲವು ಸಂಘಗಳಿಗೆ ಬಿಡುಗಡೆ ಮಾಡದೇ ಜಿಲ್ಲಾ ಬ್ಯಾಂಕಿಗೆ ಬಡ್ಡಿ ಕಟ್ಟುತ್ತ ಬರುತ್ತಿವೆ. ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮುಂತಾದ ಸೌಲಭ್ಯಗಳನ್ನು ಜಾರಿಗೆ ತರಲು ಸರ್ಕಾರ ನೇಮಿಸಿದ್ದ ಸಮಿತಿ ವರದಿ ನೀಡಿ ಐದು ವರ್ಷ ಕಳೆದರೂ ಜಾರಿಯಾಗಿಲ್ಲ. ಇದರಿಂದ 22 ಸಾವಿರ ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗಾಗಿ ರಾಜ್ಯ ಮಟ್ಟದಲ್ಲಿ ಪ್ರಾಧಿಕಾರ ರಚಿಸಿ ಆ ಮೂಲಕ ಸೇವಾ ಸೌಲಭ್ಯ ಒದಗಿಸಬೇಕು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ಗಳ ಹಿಡಿತಕ್ಕೆ ನೌಕರರನ್ನು ಒಳಪಡಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ, ಜಿಲ್ಲಾಧ್ಯಕ್ಷ ಕಲ್ಲನಗೌಡ್ರ ಮೂಗನ್ನವರ, ಆನಂದ ಹಾಲಗಂಡಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net