

ಮೈಸೂರು: ಸಹಕಾರ ಚಳವಳಿಯಲ್ಲಿ ಯುವ ಜನರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಹಕಾರ ವ್ಯವಸ್ಥೆಯ ಪ್ರಗತಿಗೆ ಕೈಜೋಡಿಸಬೇಕಿದೆ. ಇದು ದೇಶದ ಅಭಿವೃದ್ಧಿಗೂ ನೆರವಾಗಲಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಸಹಕಾರಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರವು 2025ರಲ್ಲಿ ರಾಷ್ಟ್ರೀಯ ಸಹಕಾರ ನೀತಿ ಜಾರಿಗೆ ತಂದಿದೆ. ಇಷ್ಟು ದಿನ ಇದ್ದ ಸಹಕಾರಿ ಕಾಯ್ದೆಗಳು ಹಳೆಯದು. ಆಧುನಿಕ ಭಾರತ ನಿರ್ಮಾಣಕ್ಕೆ ಹೊಸ ಸಹಕಾರ ನೀತಿ ಅನುಷ್ಠಾನಕ್ಕೆ ತರಲಾಗಿದೆ. ಜತೆಗೆ, ಇದು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೂ ಅನುವು ಮಾಡಿಕೊಡಲಿದೆ. ಇದಕ್ಕೆ ಬೆಂಬಲವಾಗಿ ಸಹಕಾರಿ ಸಂಸ್ಥೆಗಳು ನಿಲ್ಲಬೇಕು ಎಂದು ತಿಳಿಸಿದರು.
ಸಹಕಾರ ಕ್ಷೇತ್ರವು ಎಲ್ಲ ಜಾತಿ, ಧರ್ಮ, ವರ್ಗದವರನ್ನೂ ಒಳಗೊಳ್ಳಬೇಕು. ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ. ಆಧುನಿಕ ತಂತ್ರಜ್ಞಾನಕ್ಕೂ ತೆರೆದುಕೊಳ್ಳಬೇಕಾಗಿದೆ. ಯುಪಿಎ ಮೂಲಕ ಆನ್‌ಲೈನ್ ಹಣಕಾಸಿನ ವ್ಯವಹಾರ ಸೌಲಭ್ಯ ಜಾರಿ ಮಾಡಿಕೊಳ್ಳಬೇಕು. ಡಿಜಿಟಲೀಕರಣ ಮತ್ತು ತಂತ್ರಜ್ಞಾನವನ್ನೂ ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರ ಮತ್ತಷ್ಟು ವಿಸ್ತರಣೆಯಾಗಬೇಕು. ಟ್ಯಾಕ್ಸಿ, ವಿಮೆ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇದು ಕಾರ್ಯನಿರ್ವಹಿಸಬೇಕು. ಜತೆಗೆ, ಇನ್ನಷ್ಟು ಹೆಚ್ಚಿನ ಸ್ವಾತಂತ್ರೃ ಮತ್ತು ಸ್ವಾಯತ್ತವನ್ನೂ ಕಲ್ಪಿಸಿಕೊಡಬೇಕಿದೆ ಎಂದರು.
ಸಹಕಾರ ವ್ಯವಸ್ಥೆಯಿಂದ ಕೃಷಿ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕಿದೆ. ಆಹಾರ ಉತ್ಪನ್ನಗಳ ಉತ್ಪಾದನೆ, ದಾಸ್ತಾನು, ಸಂಸ್ಕರಣೆ ಮತ್ತು ಮಾರುಕಟ್ಟೆ ಹೀಗೆ ಆರಂಭದಿಂದ ಅಂತ್ಯದವರೆಗೆ ವಿವಿಧ ಹಂತದ ವ್ಯವಸ್ಥೆ ಮಾಡಿಕೊಡಬೇಕಿದೆ. ಕೃಷಿ ಉತ್ಪನ್ನಗಳು ಸೇರಿದಂತೆ ವಿವಿಧ ಬಗೆಯ ವಸ್ತುಗಳ ರಫ್ತಿಗೂ ಉತ್ತೇಜನ ಕೊಡಬೇಕಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆ ಅನೇಕ ಸಮಸ್ಯೆ ಸೃಷ್ಟಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು, ಪರಿಸರ ಸಂರಕ್ಷಣೆಗೆ ನೆರವಾಗಲು ಸಹಕಾರ ಕ್ಷೇತ್ರ ಕೆಲಸ ಮಾಡಬೇಕು. ಈ ರೀತಿಯ ವಿವಿಧ ಆಯಾಮದಲ್ಲಿ ಕಾರ್ಯನಿರ್ವಹಿಸಲು ರಾಷ್ಟ್ರೀಯ ಸಹಕಾರ ನೀತಿ ಅನುಕೂಲವಾಗಲಿದೆ ಎಂದರು.
ಮೈಸೂರು ಸಂಸ್ಥಾನದ ಸುವರ್ಣ ಯುಗದಲ್ಲಿ ಈ ಸಹಕಾರ ಬ್ಯಾಂಕ್ ಸ್ಥಾಪನೆಯಾಗಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಇದು ಹೆಮ್ಮೆಯ ಸಂಗತಿ. ನಗರ ಹೃದಯಭಾಗವಾದ ಅಗ್ರಹಾರ ವೃತ್ತದಲ್ಲಿರುವ ಇದರ ಪಾರಂಪರಿಕ ಕಟ್ಟಡವನ್ನು ಸಂರಕ್ಷಣೆ ಮಾಡಿ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಡಿ.ಬಸವರಾಜು(ಬಸಪ್ಪ), ಉಪಾಧ್ಯಕ್ಷೆ ಎಚ್.ಎನ್.ಸರ್ವಮಂಗಳಾ, ಪ್ರಧಾನ ವ್ಯವಸ್ಥಾಪಕ ಡಿ.ಅನಂತವೀರಪ್ಪ ಇದ್ದರು.