ಸಹಕಾರ ಕ್ಷೇತ್ರದಿಂದ ರೈತರ ಅಭಿವೃದ್ಧಿ

sri sahalkara
ಶೃಂಗೇರಿ ಶಾರದಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಹಿರಿಯ ಸಹಕಾರಿ ಮಂಡಗದ್ದೆ ಅಶೋಕ್ ದಂಪತಿಯನ್ನು ಗೌರವಿಸಲಾಯಿತು. ಶಿವಮೂರ್ತಿ, ರಾಜೇಂದ್ರ, ಚೇತನ್ ಹೆಗ್ಡೆ ಇತರರಿದ್ದರು.
Published on

ಶೃಂಗೇರಿ: ಸಹಕಾರ ಪದ್ಧತಿ ಸದೃಢವಾದರೆ ರೈತರ ಬದುಕು ಉತ್ತಮವಾಗುತ್ತದೆ ಎಂದು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ಹೇಳಿದರು.

ಶಾರದಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆ ಪಾತ್ರ ವಿಷಯದ ಬಗ್ಗೆ ಮಾತನಾಡಿದರು.

ಕೃಷಿ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮುಖ್ಯ ಪಾತ್ರ ವಹಿಸಿದೆ. ಸಹಕಾರಿ ಕ್ಷೇತ್ರದಿಂದ ಸಾಲ ಪಡೆದ ರೈತರು ಜಮೀನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸಹಕಾರ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದ್ದು, ಇದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್.ಮಹಾಬಲ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಇರಬೇಕು. ರಾಜಕೀಯ ಹೊರತಾಗಿ ಸಹಕಾರ ಕ್ಷೇತ್ರ ಬೆಳೆಯಬೇಕು. ಸಹಕಾರ ಸಂಘ ಕೇವಲ ಬಡ್ಡಿ ಆದಾಯದಿಂದ ಬೆಳೆಯಲು ಸಾಧ್ಯವಿಲ್ಲ. ಬೆಳವಣಿಗೆಗೆ ವಿಭಿನ್ನ ಆದಾಯ ಮೂಲ ಅಗತ್ಯವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ ಮಾತನಾಡಿ, ರೈತರಿಗೆ ನೀಡುವ ಕಡಿಮೆ ಬಡ್ಡಿ ದರದ ಸಾಲಕ್ಕೆ ನಬಾರ್ಡ್ ಕಡಿತ ಮಾಡಿದ್ದು, ಇದರಿಂದ ರೈತರಿಗೆ ಅಗತ್ಯವಿರುವಷ್ಟು ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಿ, ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಹಿರಿಯ ಸಹಕಾರಿಗಳಾದ ಮಂಡಗದ್ದೆ ಅಶೋಕ್ ಮತ್ತು ಕೆ.ಆರ್.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾರದಾ ಪಿಎಸಿಎಸ್ ಅಧ್ಯಕ್ಷ ಚೇತನ್ ಹೆಗ್ಡೆ, ತಾಲೂಕಿನ ವಿವಿಧ ಸಹಕಾರ ಸಂಘದ ಅಧ್ಯಕ್ಷರು, ಸೌಹರ್ದ ಸಹಕಾರ ಸಂಘದ ಅಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net