ಸಹಕಾರ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅಪಾರ

27blrp2
ಬೇಲೂರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಎಚ್.ಡಿ.ದೇವೇಗೌಡ ಸಭಾಂಗಣವನ್ನು ಶಾಸಕ ಕೆ.ಎಸ್.ಲಿಂಗೇಶ್ ಉದ್ಘಾಟಿಸಿದರು. ಬಿ.ಹಿರಣ್ಣಯ್ಯ, ಬಿ.ಬಿ.ನಿಂಗಯ್ಯ, ಶ್ರೀಕಾಂತ್ ಇತರರು ಇದ್ದರು.
Published on

ಬೇಲೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹಕಾರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಹಾಗಾಗಿ, ಅವರ ಹೆಸರಿನಲ್ಲೇ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಭಾಂಗಣಕ್ಕೆ ಎಚ್.ಡಿ.ದೇವೇಗೌಡರ ಹೆಸರಿಟ್ಟಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಎಚ್.ಡಿ.ದೇವೇಗೌಡ ಸಭಾಂಗಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, 1938ರಲ್ಲಿ ಪ್ರಾರಂಭವಾದ ಈ ಬ್ಯಾಂಕ್ ಹಲವಾರು ಜನರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿಯತ್ತ ಸಾಗಿದೆ. ಈ ಬ್ಯಾಂಕ್‌ನಿಂದ ರೈತರಿಗೆ ಸಾಲ ಸೌಲಭ್ಯಗಳನ್ನು ಕೊಟ್ಟು ಅನುಕೂಲ ಕಲ್ಪಿಸಿದ್ದು, ಉತ್ತಮ ಜೀವನ ಕಂಡುಕೊಂಡಿದ್ದಾರೆ ಎಂದರು.

ರೈತರು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ ಬ್ಯಾಂಕ್ ಬೆಳವಣಿಗೆ ಹೆಚ್ಚುತ್ತದೆ. ರೈತರ ಬದುಕಿಗೆ ಸಹಕಾರ ಬ್ಯಾಂಕ್ ಆಸರೆಯಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಬದುಕು ಹಸನಾಗುತ್ತದೆ. ನಾನು ಸಹ ಈ ಬ್ಯಾಂಕ್‌ನ ಅಧ್ಯಕ್ಷನಾಗಿ ಕೆಲಸ ಮಾಡಿದ ನಂತರವೇ ಶಾಸಕನಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ರೈತರ ಸಾಲ ಮನ್ನಾ ಆಗಬೇಕಾದರೆ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ಬ್ಯಾಂಕುಗಳು ಸರ್ಕಾರದ ಸವಲತ್ತು ಹಾಗೂ ಸಂಸದರು ಶಾಸಕರನ್ನೊಳಡಂತೆ ಸಹಾಯ ಪಡೆದು ಬ್ಯಾಂಕಿನ ಶ್ರೇಯೋಬಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬಿ.ಹಿರಣ್ಣಯ್ಯ ಮಾತನಾಡಿ, ಬ್ಯಾಂಕಿನ ಬೆಳವಣಿಗೆ ರೈತರ ಕೈಯಲ್ಲಿದೆ. ಬ್ಯಾಂಕಿನ ಅಭಿವೃದ್ಧಿಗಾಗಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೇ, ಕೆಳಗಿನ ಕಟ್ಟಡವನ್ನು ಬಾಡಿಗೆ ನೀಡಿ ಬ್ಯಾಂಕಿಗೆ ಆದಾಯ ಬರುವಂತೆ ಮಾಡಲು ಎಲ್ಲರ ಸಹಕಾರ ಕಾರಣವಾಗಿದೆ. ಬ್ಯಾಂಕಿಗೆ ಆದಾಯ ತರುವ ಯೋಜನೆಗೆ ಎಲ್ಲ ನಿರ್ದೇಶಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಬ್ಯಾಂಕಿನ ವ್ಯವಸ್ಥಾಪಕ ಶ್ರೀಕಾಂತ್, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಶಿವಶಂಕರ್, ನಿರ್ದೇಶಕರಾದ ದಿನೇಶ್, ಗೌರಮ್ಮ, ಚಿತ್ರಲೇಖ, ಸುನೀಲ್‌ಕುಮಾರ್, ನಟರಾಜ್, ರಮೇಶ್, ರಾಜಶೇಖರ್, ಬ್ಯಾಂಕ್ ವ್ಯವಸ್ಥಾಪಕಿ ಆಶಾ, ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಮೊಗಪ್ಪಗೌಡ, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net