

ಮೈಸೂರು: ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳೆದರೆ ಎಲ್ಲರಿಗೂ ಸಮಾನತೆ, ಆರ್ಥಿಕ ಪ್ರಗತಿಗೆ ದಾರಿಯಾಗಲಿದೆ. ಸಹಕಾರ ಕ್ಷೇತ್ರ ಸ್ವಾಯತ್ತದಿಂದ ಕೆಲಸ ಮಾಡಿದಷ್ಟು ಅಭಿವೃದ್ಧಿ ಕಂಡು ನೂರಾರು ಜನರಿಗೆ ನೆರವಾಗಲು ಕಾರಣವಾಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಬೋಗಾದಿ ರಿಂಗ್ ರಸ್ತೆಯ ಜಿಎಲ್‌ಎನ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಾರದ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಹಕಾರ ಕ್ಷೇತ್ರ ಸ್ವಾಯತ್ತ, ಸ್ವಾವಲಂಬಿಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಬ್ಯಾಂಕ್, ಸಂಘಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ ಎಂದರು.
ಸರ್ಕಾರಿ ಬ್ಯಾಂಕ್‌ಗಳಿಂದ ತರಕಾರಿ, ಹಣ್ಣು ವ್ಯಾಪಾರ ಮಾಡುವವರು, ಗುಡಿ ಕೈಗಾರಿಕೆಗಳನ್ನು ಮಾಡುವವರಿಗೆ ಸಾಲ ಸೌಲಭ್ಯ ನೀಡುವುದಿಲ್ಲ. ಅಂಥವರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸಾಲ ಸೌಲಭ್ಯ ನೀಡಿದರೆ ಅವರ ಆರ್ಥಿಕ ಪ್ರಗತಿಗೆ ಅನುಕೂಲವಾಗಲಿದೆ. ಖಾಸಗಿ ಸಾಲದಿಂದ ಬಂಡವಾಳ ಹಾಕಿಸದೆ ಸಹಕಾರ ಸಂಘಗಳಿಂದ ಸಾಲ ಕೊಟ್ಟರೆ ಆರ್ಥಿಕವಾಗಿ ನೆರವಾಗಲಿದೆ ಎಂದು ಹೇಳಿದರು.
ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಾಲ ಕೊಡಲಾಗುತ್ತಿಲ್ಲ. ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಸಹಕಾರ ಸಂಘಗಳಿಗೆ ಅನುದಾನ ಕೊಡುತ್ತಿಲ್ಲ.
ಶೇ.3ರಷ್ಟು ಬಡ್ಡಿದರದಲ್ಲಿ ಸಾಲ ಕೊಡಬಹುದು ಹೊರತು ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಸಹಕಾರ ಕ್ಷೇತ್ರ ನಮ್ಮದೆಂದು ಸರ್ಕಾರ ಹೇಳಿಕೊಳ್ಳುತ್ತಿದೆಯೇ ಹೊರತು ಅನುದಾನ ಕೊಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದಲ್ಲಿ ಮಾಡಿಕೊಂಡು ಬಂದಿರುವ ಕೆಲಸ, ಅನುಭವ ನೋಡಿದರೆ ಸಹಕಾರ ಕ್ಷೇತ್ರ ರಾಜಕೀಯ ಮತ್ತು ಸರ್ಕಾರದ ಹಸ್ತಕ್ಷೇಪದಿಂದ ದೂರವಿರಬೇಕು. ಠೇವಣಿದಾರರು ಬ್ಯಾಂಕ್, ಸಂಘದ ಮೇಲೆ ವಿಶ್ವಾಸ ಇಟ್ಟು ಠೇವಣಿ ಇಡುತ್ತಾರೆ. ಸದಸ್ಯರಿಗೆ ಕಾಲಕಾಲಕ್ಕೆ ಸೌಲಭ್ಯಗಳನ್ನು ನೀಡಿದರೆ ಮತ್ತಷ್ಟು ಪ್ರಗತಿ ಹೊಂದಬಹುದು ಎಂದರು.
ಸಂಘದ ಅಧ್ಯಕ್ಷ ವಿ.ವೆಂಕಟೇಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಕೆ.ವೆಂಕಟಕೃಷ್ಣ ಭಟ್, ನಿರ್ದೇಶಕರಾದ ಎಸ್.ವೆಂಕಟೇಶ್, ಟಿ.ಎನ್.ರಾಮದಾಸ್, ಎಂ.ಮಹೇಂದ್ರ, ಜೆ.ಎಸ್.ಗೋಪಾಲಕೃಷ್ಣ, ಕೆ.ಆರ್.ನಟರಾಜು, ಎಚ್.ಎಸ್.ಲಲಿತಾ ನಾಗರಾಜ್, ವೈ.ಕೆ.ರೇವತಿ, ಎಂ.ಆರ್.ಯೋಗೀಶ್, ಎಂ.ಗೋಪಾಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ಕೃಷ್ಣಮೂರ್ತಿ ಇದ್ದರು. ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.