ಸಹಕಾರ ಕಾಯ್ದೆ ತಿದ್ದುಪಡಿಗೆ ತಕರಾರು ಇಲ್ಲ: ಶಾಸಕ ಜಿ.ಟಿ.ದೇವೇಗೌಡ

chamundeshwari_-JDS_-G.T.Devegowda-MLA
Published on

ಮೈಸೂರು: ಸರ್ಕಾರವು ಸಹಕಾರ ಕಾಯ್ದೆಗೆ ಕೆಲವು ತಿದ್ದುಪಡಿ ಮಾಡಲು ಸದನದ ಮುಂದೆ ಮಂಡಿಸಿದೆ. ಈ ಪೈಕಿ ಪ್ರತಿಯೊಂದು ಸಹಕಾರ ಸಂಘಕ್ಕೂ ಹೊಸದಾಗಿ 3 ಜನರನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದ್ದು, ಇದರ ಬಗ್ಗೆ ನಮ್ಮ ಎಲ್ಲ ಸಹಕಾರಿಗಳಿಂದ ಯಾವುದೇ ತಕರಾರು ಇಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ವಿಧಾನಸಭಾ ಅಧೀವೇಶನದಲ್ಲಿ ತಿಳಿಸಿದರು.

ಮಂಗಳವಾರ ಕರ್ನಾಟಕ ಸಹಕಾರ ಕಾಯ್ದೆ ತಿದ್ದುಪಡಿ ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಅವರು, ಪ್ರಸ್ತುತ ಈಗಾಗಲೇ ಹಾಲಿ 6 ಸದಸ್ಯರಿಗೆ ಮೀಸಲಾತಿ ಇದ್ದು, ಈಗ ಮತ್ತೆ 3 ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಹಿಂದೆ, ಇದೇ ಬಿಲ್ ವಿಚಾರವಾಗಿ ಅಧಿವೇಶನದಲ್ಲಿ ಮಾತನಾಡಿರುವುದಕ್ಕೆ ಪರಿಶಿಷ್ಟ ಜಾತಿ ಸಮುದಾಯದವರು ನನ್ನ ವಿರುದ್ಧ ಧರಣಿ ಮಾಡಿದ್ದರು.

ಆದರೆ, ನಾನು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಒಬ್ಬ ದಲಿತ ಸಹಕಾರಿ ಮುಖಂಡ ನಂಜುಂಡಸ್ವಾಮಿ ಅವರನ್ನು ಅಧ್ಯಕ್ಷರಾಗಿ ಮಾಡಿದ್ದೇ ನಾನು.

ಇದುವರೆವಿಗೂ ರಾಜ್ಯದ 30 ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಅಧ್ಯಕ್ಷರನ್ನಾಗಿ ಯಾರೂ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ಈಗ 3 ನಾಮನಿರ್ದೇಶನ ಮಾಡುತ್ತಿರುವುದು ಸ್ವಾಗತಾರ್ಹ. ಅದರಲ್ಲಿ 1 ಎಸ್‌ಸಿ, 1 ಎಸ್‌ಟಿ ಮತ್ತು 1 ಸ್ಥಾನ ಸಾಮಾನ್ಯ ಮಹಿಳೆಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಹಿಂದುಳಿದ ವರ್ಗದವರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗದವರನ್ನು ಕಟ್ಟಿಕೊಂಡು ಬಂದಿದ್ದಾರೆ. ಈ ಅವಕಾಶವನ್ನು ಏಕೆ ಮಾಡಿಲ್ಲ? ಈಗಲೂ ಮೂವರ ಜತೆಗೆ ಹಿಂದುಳಿದವರಿಗೂ ಒಂದು ಸ್ಥಾನ ಕಲ್ಪಿಸಲು ಮರುಪರಿಶೀಲನೆ ಮಾಡಲಿ.

ಸಹಕಾರಿ ಕಾನೂನು ತಿದ್ದುಪಡಿ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು ಎಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್ ಹಲವು ತೀರ್ಪುಗಳಲ್ಲಿ ತಿಳಿಸಿರುವಂತೆ ಸರ್ಕಾರದ ಷೇರು ಧನ ಇಲ್ಲದೆ ಇರುವಂತಹ ಸಹಕಾರ ಸಂಘಗಳಿಗೆ ನಾಮನಿರ್ದೇಶನ ಮಾಡುವುದು ಸಹಕಾರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net