ಸಹಕಾರ ಆಸ್ಪತ್ರೆಗೆ ₹ 66 ಲಕ್ಷ ಲಾಭ

hospital
Published on

ಬೀದರ್: ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ 2019-20ನೇ ಸಾಲಿನಲ್ಲಿ 66.06 ಲಕ್ಷ ರೂ. ಲಾಭದಲ್ಲಿದೆ ಎಂದು ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಜರುಗಿದ ಆಸ್ಪತ್ರೆಯ 7ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರ ರಂಗದ ಭೀಷ್ಮರೆನಿಸಿದ್ದ ತಂದೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಸ್ಥಾಪಿಸಿರುವ ಈ ಆಸ್ಪತ್ರೆಗೆ ಯಶಸ್ವಿಯಾಗಿ ಮುನ್ನಡೆಸಲಾಗಿದೆ. ಎಲ್ಲರ ಸಹಕಾರದಿಂದ ಮುಂದಿನ 5 ವರ್ಷಕ್ಕಾಗಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂದರು.

ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯಗಳುಳ್ಳ ಯಂತ್ರೋಪಕರಣ ಹೊಂದಿದೆ. 2019-20ನೇ 2052 ಜನರಿಗೆ ಎಂಆರ್‌ಐ, 1331 ಸಿಟಿ ಸ್ಕ್ಯಾನ್, 1624 ಎಕ್ಸರೇ, 2620 ಯುಎಸ್ ಜಿ, 518 ಇಸಿಜಿ, 14551 ಲ್ಯಾಬ್ ಟೆಸ್ಟ್ ಮಾಡಲಾಗಿದೆ. 13908 ಓಪಿಡಿ, 3798 ಐಪಿಡಿ, 489 ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಮತ್ತು ಸ್ಟಾರ್ ಹೆಲ್ತ್ ಇನ್ಶೂರೆನ್ಸನಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಆರಂಭವಾದಾಗಿನಿಂದ ಈವರೆಗೆ 1.50 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿವರಿಸಿದರು.

ದಿ. ನಾಗಮಾರಪಳ್ಳಿ ಅವರು ರಾಜ್ಯದಲ್ಲಿ ಪ್ರಥಮ ಬಾರಿ ಇಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಸಹಕಾರ ಆಸ್ಪತ್ರೆ ಆರಂಭಿಸಿ, ಸಾವಿರಾರು ರೈತರ, ಸಾರ್ವಜನಿಕರ ಆರೋಗ್ಯ ಸುಧಾರಿಸುವ ಕಾರ್ಯ ಮಾಡಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ಸ್ಥಳೀಯರು ನೆರೆ ನಗರಗಳಿಗೆ ಹೋಗುವ ಸಂಖ್ಯೆ ನಮ್ಮ ಆಸ್ಪತ್ರೆ ಕಡಿಮೆ ಮಾಡಿದೆ ಎಂದರು.

ಭಾಲ್ಕಿ ರಸ್ತೆಯ ಲಾಲ್ಬಾಗ್ ಸಮೀಪ 70 ಎಕರೆ ಜಮೀನು 4 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. ಈವರೆಗೆ 64 ಎಕರೆ ಜಮೀನಿನ ಕ್ರಯಪತ್ರ ಆಸ್ಪತ್ರೆ ಹೆಸರಿಗೆ ಮಾಡಿಕೊಂಡಿದ್ದು, ಎನ್ಎ ಮಾಡಲಾಗಿದೆ. ಉಳಿದ ಜಮೀನಿನ ಕ್ರಯಪತ್ರ ಮಾಡಿಕೊಳ್ಳಬೇಕಿದೆ. ಜಮೀನಿನ ಸುತ್ತ ಕಾಂಪೌಂಡ್ ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದರು.

ಆಸ್ಪತ್ರೆಯ ಎಲ್ಲ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net