ಸಸ್ಪೆಂಡ್ ಹಿಂದೆ ನನ್ನ ಕೈವಾಡ ಇಲ್ಲ ಎಂದ ಶಾಸಕ ಎಚ್.ಕೆ. ಸುರೇಶ್

ಸಸ್ಪೆಂಡ್ ಹಿಂದೆ ನನ್ನ ಕೈವಾಡ ಇಲ್ಲ ಎಂದ ಶಾಸಕ ಎಚ್.ಕೆ. ಸುರೇಶ್
Published on

ಹಾಸನ: ಜಿಲ್ಲೆಯ ಬೇಲೂರು ಪ್ಲಾಂಟರ್ಸ್ ಕ್ಲಬ್‌ನಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಮದ್ಯಪಾನ ಮಾಡಿದ ದುರ್ವರ್ತನೆ ಆರೋಪದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರ್ಧಾರ ಅಭಿನಂದನಾರ್ಹ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಬೇಲೂರು ವಿಶ್ವವಿಖ್ಯಾತ ಪಾರಂಪರಿಕ ತಾಣ. ಸುಮಾರು 900 ವರ್ಷಗಳ ಇತಿಹಾಸ ಹೊಂದಿ ತನ್ನದೆ ಸ್ಥಾನ ಪಡೆದಿದೆ. ಹಂಪಿಯನ್ನು ಹೊರತು ಪಡಿಸಿದರೆ ಬೇಲೂರು ಮತ್ತು ಹಳೇಬಿಡು ಆ ಸ್ಥಾನಕ್ಕೆ ಸೇರುತ್ತದೆ. ಜನರ ರಕ್ಷಣೆ ಮಾಡಬೇಕಾದ ಸಮಯದಲ್ಲಿ ಮಧ್ಯಾಹ್ನ 2.30ರಿಂದ ರಾತ್ರಿ 8.30ರವರೆಗೂ ಐದಾರು ಜನ ಪೊಲೀಸ್ ಅಧಿಕಾರಿಗಳು ಪ್ಲಾಂಟರ್ಸ್‌ ಕ್ಲಬ್‌ನಲ್ಲಿ ಹತ್ತಾರು ಬಾಟಲಿ ಕುಡಿದಿರುವುದು ವಿಷಾದನೀಯ. ಹಾಡಹಗಲೇ ಕರ್ತವ್ಯದಲ್ಲಿ ಇರುವ ಅವಧಿಯಲ್ಲೇ ಕಾನೂನಿನ ರಕ್ಷಣೆ ಮಾಡಬೇಕಿರುವ ಪೊಲೀಸ್ ಅಧಿಕಾರಿಗಳು ಮದ್ಯಪಾನ ಮಾಡುವುದರ ಜತೆಗೆ ಕ್ಲಬ್‌ನ ಸಿಬ್ಬಂದಿ ಜತೆಗೆ ದುರ್ವರ್ತನೆ ತೋರಿದ್ದಾರೆ. ಪೊಲೀಸ್ ಅಧಿಕಾರಿಗಳೇ ಈ ರೀತಿಯಾದರೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ ಎಂದು ಭಾನುವಾರ ಸುದ್ದಿಗೋಷ್ಠಿಯಲಿ ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳ ಅಮಾನತು ಹಿಂದೆ ನನ್ನ ಕೈವಾಡ ಇದೆ ಎಂಬ ಆರೋಪ ವ್ಯಕ್ತವಾಗಿದೆ. ಆದರೆ ಪೊಲೀಸರ ಸಸ್ಪೆಂಡ್ ಹಿಂದೆ ನನ್ನ ಕೈವಾಡ ಇಲ್ಲ. ಕ್ಲಬ್‌ನಲ್ಲಿ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಘಟನೆ ನಡೆದಿರುವ ಎಲ್ಲಾ ವಿಚಾರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಿಸಿ ಗೃಹ ಸಚಿವರಿಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಸರ್ಕಾರಿ ಅಧಿಕಾರಿಗಳ ಜತೆ ಜನಪ್ರತಿನಿಧಿಗಳು ಮಾತನಾಡುವ ಆಡಿಯೋ ವೈರಲ್ ಮಾಡುವುದು ಕಾನೂನುಬಾಹಿರ. ಆದರೆ ಪೊಲೀಸ್ ಅಧಿಕಾರಿ ಜತೆ ನಾನು ಮಾತನಾಡಿರುವ ಆಡಿಯೋ ವೈರಲ್ ಮಾಡಿರುವವರು ಯಾರು ಎಂದು ಪ್ರಶ್ನಿಸಿದ ಅವರು, ಈ ಆಡಿಯೋ ವೈರಲ್ ವಿಚಾರವಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ. ಈಗಾಗಲೇ ನಾನು ಈ ವಿಚಾರವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ, ಟಿ.ಪಿ. ಪರಮೇಶ್, ರತೀಶ್, ದಿಶಾಂತ್ ಕುಮಾರ್, ಮಂಜಣ್ಣ, ಎಸ್. ಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net