ಸಸಿ ನೆಡುವುದು ನೆಪಕ್ಕೆ ಸೀಮಿತವಾಗದಿರಲಿ

Sasi
Published on

ಚಿತ್ರದುರ್ಗ: ನೆಟ್ಟ ಸಸಿಗಳ ಪೋಷಣೆ ಸರಿಯಾದ ಕ್ರಮದಲ್ಲಿ ಆಗದ ಕಾರಣ ದಿನಾಚರಣೆಗಳು ನೆಪಕ್ಕೆ ಮಾತ್ರ ಎನ್ನುವಂತಾಗಿದೆ ಎಂದು ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ ವಿಷಾದಿಸಿದರು.

ಮುರುಘಾಮಠ, ಎಸ್‌ಜೆಎಂ ವಿದ್ಯಾಪೀಠ, ಜಿಲ್ಲಾ ಅರಣ್ಯ ಇಲಾಖೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಸ್‌ಎನ್ ಸ್ಮಾರಕದಲ್ಲಿ ಭಾನುವಾರ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 50 ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ವನ ಮಹೋತ್ಸವ ಹೆಸರಿನಲ್ಲಿ ಸಸಿ ನೆಡುತ್ತಲೇ ಬಂದಿದ್ದೇವೆ. ಆದರೆ, ಉಳಿದಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಹಾಕಿದ ಸಸಿಗಳೆಲ್ಲವೂ ಗಿಡ-ಮರಗಳಾಗಿದ್ದರೆ, ಆ ಸ್ಥಳಗಳಲ್ಲಿ ನಾವಿಂದು ಕಾಲಿಡಲು ಆಗುತ್ತಿರಲಿಲ್ಲ. ಎಲ್ಲೆಡೆ ಸಸ್ಯ ಸಂಪತ್ತು ರಾರಾಜಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ ಎಂದು ಬೇಸರಿಸಿದರು.

ಎಸ್ಸೆನ್ ಕನ್ನಡ ನಾಡಿನ ಏಕೀಕರಣ ಮತ್ತು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದರು. ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಸಮಾಧಿ ಸ್ಮಾರಕವಾಗಿ ಉಳಿಯಬೇಕೆಂಬ ಅಪೇಕ್ಷೆ ಇರಲಿಲ್ಲ. ನಾನೂ, ಸ್ವಾಮೀಜಿ ಅವರು ಒಪ್ಪಿಸಿದೆವು. ದೇಶ ಪ್ರೇಮವುಳ್ಳ ರಾಜಕಾರಣಿಯ ಕುರಿತು ಮುಂದಿನ ಪೀಳಿಗೆಗೂ ಗೊತ್ತಾಗಲಿ ಎಂಬ ಆಶಯದೊಂದಿಗೆ ಸ್ಮಾರಕ ನಿರ್ಮಿಸಲಾಯಿತು ಎಂದರು.

ನಿಜಲಿಂಗಪ್ಪ ಅವರ ರಾಜಕೀಯ ಇಂದಿನ, ಮುಂದಿನ ರಾಜಕಾರಣಿಗಳಿಗೆ ಆದರ್ಶವಾಗಿರಲಿ ಎಂಬ ಸದುದ್ದೇಶದಿಂದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಸಮೀಪದ ಜಾಗದಲ್ಲಿ ಜನಪ್ರತಿನಿಧಿಗಳಿಗಾಗಿ ಒಂದು ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಶ್ರೀ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಈಗಾಗಲೇ ಮಠದಿಂದ ಸಾವಿರಾರು ಸಸಿ ನೆಡಲಾಗಿದೆ. ಅವು ಗಿಡ-ಮರವಾಗಿ ಉಳಿಯಬೇಕು ಎಂಬ ಆಶಯ, ಸಂಕಲ್ಪ ಶ್ರೀಮಠದ್ದಾಗಿದೆ ಎಂದರು.

ಬಸಸಮೂರ್ತಿ ಮಾದರ ಚನ್ನಯ್ಯ ಶ್ರೀ, ಬಸವಪ್ರಭು ಶ್ರೀ, ಮಲ್ಲಿಕಾರ್ಜುನ ಶ್ರೀ, ಟ್ರಸ್ಟ್‌ನ ಧರ್ಮದರ್ಶಿ ಎಸ್.ಷಣ್ಮುಖಪ್ಪ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಗುತ್ತಿನಾಡು ಪ್ರಕಾಶ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಪಿ.ಬಿ.ನಿರ್ಮಲಾ, ಜಿಲ್ಲಾ ಶಿವಸಿಂಪಿ ಸಮಾಜದ ಅಧ್ಯಕ್ಷೆ ಅನಿತಾ, ಕಾರ್ಯದರ್ಶಿ ಕವಿತಾ, ಮಾಜಿ ಅಧ್ಯಕ್ಷೆ ಶೈಲಜಾ, ಮುಖಂಡರಾದ ಮಂಜಣ್ಣ, ಎಚ್.ಬಾಲಚಂದ್ರಪ್ಪ, ನಾಗರಾಜ ಸಂಗಮ್, ಎಂ.ಎಸ್.ಮೃತ್ಯುಂಜಯ, ಡಿ.ವಿ.ಮುರುಗೇಶ್, ಎನ್.ತಿಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net