ಹೊಳೆನರಸೀಪುರ: ಇಲ್ಲಿನ ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ಮಂಗಳವಾರ ತೀವ್ರ ತೊಂದರೆ ಅನುಭವಿಸಿದರು.
ಅಧಿಕಾರಿಗಳು ಸಾರ್ವಜನಿಕರಿಗೆ ಮಾಧ್ಯಮದ ಮೂಲಕ ಮಾಹಿತಿ ನೀಡದೆ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಕರೆಂಟ್ ತೆಗೆದಿದ್ದು ಹೋಟೆಲ್ ಮಾಲೀಕರು, ಸೈಬರ್ ಸೆಂಟರ್, ಖಾಸಗಿ ಕಂಪನಿಗಳು, ರೈಸ್‌ಮಿಲ್‌ಗಳು ಸೇರಿದಂತೆ ಗೃಹಿಣಿಯರಿಗೆ ತೀವ್ರ ತೊಂದರೆ ಆಯಿತು.
ಈ ಬಗ್ಗೆ ವಿಚಾರಿಸಲು ಮಾಧ್ಯಮದವರು ಸೆಸ್ಕ್ ಎಇ, ಎಇಇ ಅವರಿಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಸೆಸ್ಕ್ 24 ಗಂಟೆ ಸೇವೆ ಒದಗಿಸುವ ವಾಹನ ಸಿಬ್ಬಂದಿಗೆ ಕರೆ ಮಾಡಿದರೆ ಅವರೂ ಉಡಾಫೆಯಿಂದ ಉತ್ತರಿಸಿದರು.
ಮೊದಲೇ ಹೇಳಿದ್ದರೆ ನಾವು ಹೋಟೆಲ್ ರಜಾ ಮಾಡುತ್ತಿದ್ದೆವು. ಸೆಸ್ಕ್ ಅಧಿಕಾರಿಗಳು ಹೇಳದೆ ಕರೆಂಟ್ ತೆಗೆದಿದ್ದರಿಂದ ನಮಗೆ ನಷ್ಟ ಉಂಟಾಯಿತು ಎಂದು ಕ್ಯಾಂಟೀನ್ ಮಾಲೀಕ ಪ್ರತಾಪ್ ದೂರಿದರು.
ಸೆಸ್ಕ್ ಅಧಿಕಾರಿಗಳ ಇಂತಹ ಬೇಜವಾಬ್ದಾರಿ ವರ್ತನೆ ವಿರುದ್ಧ ಇಂಧನ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ತೊಂದರೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಜನಸ್ಪಂದನ ವೇದಿಕೆ ಪದಾಧಿಕಾರಿ ಸುರೇಶ್‌ಕುಮಾರ್ ಆಗ್ರಹಿಸಿದ್ದಾರೆ.